Skip to content

Indian Revised Version — Kannada (2019)

ರೋಮಾಪುರದವರಿಗೆ 14

1ನಂಬಿಕೆಯಲ್ಲಿ ದೃಢವಿಲ್ಲದವರನ್ನು ಸೇರಿಸಿಕೊಳ್ಳಿರಿ, ಆದರೆ ಸಂದೇಹಾಸ್ಪದವಾದ ವಿಷಯಗಳ ಬಗ್ಗೆ ವಾಗ್ವಾದ ಮಾಡಬೇಡಿರಿ. 2ಒಬ್ಬನು ಯಾವುದನ್ನಾದರೂ ತಿನ್ನಬಹುದೆಂದು ನಂಬುತ್ತಾನೆ; ನಂಬಿಕೆಯಲ್ಲಿ ದೃಢವಿಲ್ಲದವನು ಕಾಯಿಪಲ್ಯಗಳನ್ನು ಮಾತ್ರ ತಿನ್ನುತ್ತಾನೆ. 3ತಿನ್ನುವವನು ತಿನ್ನದವನನ್ನು ಹೀನೈಸಬಾರದು; ತಿನ್ನದವನು ತಿನ್ನುವವನನ್ನು ದೋಷಿಯೆಂದು ಎಣಿಸಬಾರದು. ದೇವರು ಇಬ್ಬರನ್ನೂ ಸೇರಿಸಿಕೊಂಡಿದ್ದಾನಲ್ಲಾ? 4ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪುಮಾಡುವುದಕ್ಕೆ ನೀನು ಯಾರು? ಅವನು ನಿರ್ದೋಷಿಯಾಗಿ ನಿಂತರೂ, ದೋಷಿಯಾಗಿ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು. ಅವನು ನಿರ್ದೊಷಿಯಾಗಿ ನಿಲ್ಲಿಸಲ್ಪಡುವನು; ಅವನನ್ನು ನಿಲ್ಲಿಸುವುದಕ್ಕೆ ಕರ್ತನು ಶಕ್ತನಾಗಿದ್ದಾನೆ. 5ಒಬ್ಬನು ಒಂದು ದಿನಕ್ಕಿಂತ ಮತ್ತೊಂದು ದಿನವನ್ನು ವಿಶೇಷವೆಂದೆಣಿಸುತ್ತಾನೆ; ಮತ್ತೊಬ್ಬನು ಎಲ್ಲಾ ದಿನಗಳನ್ನೂ ವಿಶೇಷವೆಂದೆಣಿಸುತ್ತಾನೆ; ಪ್ರತಿಯೊಬ್ಬನು ತನ್ನ ತನ್ನ ಮನಸ್ಸಿನಲ್ಲಿ ಚಂಚಲಪಡದೆ ದೃಢವಾಗಿರಲಿ. 6ದಿನವನ್ನು ಆಚರಿಸುವವನು ಕರ್ತನಿಗಾಗಿ ಅದನ್ನು ಆಚರಿಸುತ್ತಾನೆ. ತಿನ್ನುವವನು ಕರ್ತನಿಗಾಗಿ ತಿನ್ನುತ್ತಾನೆ; ಅವನು ದೇವರನ್ನು ಸ್ತುತಿಸುತ್ತಾನಲ್ಲಾ. ತಿನ್ನದವನು ಸಹ ಕರ್ತನಿಗಾಗಿಯೇ ತಿನ್ನದೆ ದೇವರನ್ನು ಸ್ತುತಿಸುತ್ತಾನೆ. 7ನಮ್ಮಲ್ಲಿ ಯಾರು ತನಗಾಗಿ ಬದುಕುವುದು ಇಲ್ಲ. ತನಗಾಗಿ ಸಾಯುವುದೂ ಇಲ್ಲ, 8ನಾವು ಬದುಕಿದರೆ ಕರ್ತನಿಗಾಗಿ ಬದುಕುತ್ತೇವೆ; ಸತ್ತರೆ ಕರ್ತನಿಗಾಗಿ ಸಾಯುತ್ತೇವೆ; ಬದುಕಿದರೂ ಸತ್ತರೂ ನಾವು ಕರ್ತನವರೇ. 9ಯಾಕೆಂದರೆ ಸತ್ತವರಿಗೂ, ಜೀವಿಸುವವರಿಗೂ ಒಡೆಯನಾಗಬೇಕಂತಲೇ ಕ್ರಿಸ್ತನು ಸತ್ತು ಜೀವಿತನಾದನು. 10ತಿನ್ನದವನೇ, ನಿನ್ನ ಸಹೋದರನ ವಿಷಯವಾಗಿ ನೀನು ತೀರ್ಪುಮಾಡುವುದೇನು? ತಿನ್ನುವವನೇ, ನಿನ್ನ ಸಹೋದರನನ್ನು ನೀನು ಹೀನೈಸುವುದೇನು? ನಾವೆಲ್ಲರೂ ದೇವರ ನ್ಯಾಯಾಸನದ ಮುಂದೆ ನಿಲ್ಲಬೇಕು. 11ಪವಿತ್ರ ಶಾಸ್ತ್ರದಲ್ಲಿ: “ನಾನು ಜೀವಿಸುವುದರಿಂದ ಪ್ರತಿಯೊಬ್ಬನೂ ನನ್ನ ಮುಂದೆ ಮೊಣಕಾಲೂರುವನು. ಪ್ರತಿಯೊಂದು ನಾಲಿಗೆಯೂ ನನ್ನನ್ನು ದೇವರೆಂದು ಆರಿಕೆಮಾಡುವರು ಎಂದು ಕರ್ತನು ಹೇಳುತ್ತಾನೆ” ಎಂದು ಬರೆದಿದೆ. 12ಹೀಗಿರಲಾಗಿ ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ವಿಷಯವಾಗಿ ದೇವರ ಮುಂದೆ ಉತ್ತರಕೊಡಬೇಕು. 13ಆದಕಾರಣ, ಇನ್ನು ಮೇಲೆ ಒಬ್ಬರ ವಿಷಯದಲ್ಲೊಬ್ಬರು ತೀರ್ಪುಮಾಡದೆ ಇರೋಣ. ಅದಕ್ಕೆ ಬದಲಾಗಿ ಸಹೋದರನ ಎದುರಿಗೆ ಅಡ್ಡಿಯನ್ನಾಗಲಿ, ಅಡೆತಡೆಯನ್ನಾಗಲಿ ಹಾಕಬಾರದೆಂದು ತೀರ್ಮಾನಿಸಿಕೊಳ್ಳಿರಿ. 14ಯಾವ ಪದಾರ್ಥವೂ ಸ್ವತಃ ಅಶುದ್ಧವಾದದ್ದಲ್ಲವೆಂದು ಕರ್ತನಾದ ಯೇಸುವಿನಲ್ಲಿದ್ದುಕೊಂಡು ದೃಢವಾಗಿ ನಂಬಿದ್ದೇನೆ; ಆದರೆ ಯಾವುದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವಾಗಿರಲಿ. 15ನೀನು ತೆಗೆದುಕೊಳ್ಳುವ ಆಹಾರದಿಂದ ನಿನ್ನ ಸಹೋದರನ ಮನಸ್ಸಿಗೆ ನೋವುಂಟಾದರೆ ನೀನು ಪ್ರೀತಿಗೆ ತಕ್ಕಂತೆ ನಡೆಯುವವನಲ್ಲ. ಯಾವನಿಗೋಸ್ಕರ ಕ್ರಿಸ್ತನು ಪ್ರಾಣಕೊಟ್ಟನೋ ಅವನನ್ನು ನಿನಗೆ ಇಷ್ಟವಾದ ಆಹಾರದ ನಿಮಿತ್ತ ಕೆಡಿಸಬಾರದು. 16ನಿಮಗಿರುವ ಉತ್ತಮ ಕ್ರಮಗಳು ದೂಷಣೆಗೆ ಆಸ್ಪದವಾಗಬಾರದು. 17ಯಾಕೆಂದರೆ ತಿನ್ನುವುದೂ, ಕುಡಿಯುವುದೂ ದೇವರ ರಾಜ್ಯವಲ್ಲ ನೀತಿಯೂ, ಸಮಾಧಾನವೂ, ಪವಿತ್ರಾತ್ಮನಿಂದಾಗುವ ಆನಂದವೂ ಆಗಿದೆ. 18ಈ ಪ್ರಕಾರವಾಗಿ ಕ್ರಿಸ್ತನ ಸೇವೆಯನ್ನು ಮಾಡುವವನು ದೇವರನ್ನು ಮೆಚ್ಚಿಸುವವನೂ, ಮನುಷ್ಯರಿಗೆ ಒಳ್ಳೆಯದನ್ನು ಮಾಡುವವನೂ ಆಗಿರಲಿ. 19ಆದ್ದರಿಂದ ನಾವು ಸಮಾಧಾನಕ್ಕೂ, ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವಂಥವುಗಳನ್ನು ಸಾಧಿಸಿಕೊಳ್ಳೋಣ. 20ದೇವರು ಕಟ್ಟಿದ್ದನ್ನು ನೀನು ಆಹಾರದ ನಿಮಿತ್ತವಾಗಿ ಕೆಡವಬೇಡ. ಎಲ್ಲಾ ಪದಾರ್ಥಗಳೂ ಶುದ್ಧವೇ; ಆದರೆ ತಿಂದು ಮತ್ತೊಬ್ಬರಿಗೆ ವಿಘ್ನವನ್ನುಂಟುಮಾಡುವುದು ಕೆಟ್ಟದ್ದು. 21ಮಾಂಸ ತಿನ್ನುವುದನ್ನಾಗಲಿ, ದ್ರಾಕ್ಷಾರಸ ಕುಡಿಯುವುದಾಗಲಿ, ನಿನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವ ಬೇರೆ ಯಾವುದನ್ನಾಗಲಿ ಬಿಟ್ಟುಬಿಡುವುದೇ ಒಳ್ಳೆಯದು. 22ನಿನಗಿರುವ ನಂಬಿಕೆಯು ದೇವರಿಗೆ ಮಾತ್ರ ಗೋಚರವಾಗಿ ಅದು ನಿನ್ನ ಮಟ್ಟಿಗೆ ಮಾತ್ರ ಇರಲಿ. ತಾನು ಒಪ್ಪಿದ ವಿಷಯದಲ್ಲಿ ಸಂಶಯ ಪಡದವನೇ ಧನ್ಯನು. 23ಸಂಶಯಪಟ್ಟು ಊಟಮಾಡುವವನು ಸಂಶಯದಿಂದ ತಿನ್ನುವ ಕಾರಣ ತನ್ನ ಊಟದ ವಿಷಯದಲ್ಲಿ ನಂಬಿಕೆಯಿಲ್ಲದೆ ದೋಷಿಯಾಗಿದ್ದಾನೆ. ನಂಬಿಕೆಯ ಆಧಾರವಿಲ್ಲದಿರುವುದೆಲ್ಲವೂ ಪಾಪವೇ ಆಗಿದೆ.

Keep going

Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..

Books

✦ Explain this verse with AI AI explanations, Bible Q&A, characters, maps and more — in the Truth of Bible app →

Reading settings

Theme
Text size
100%
Layout

Loading the Bibles…

Your choice is remembered on this device and used for reading, search and the verse screen.