Skip to content

Indian Revised Version — Kannada (2019)

ಪ್ರಕಟಣೆ 11

1ತರುವಾಯ ಅಳತೆಗೊಲಿನಂಥ ಒಂದು ಕೋಲನ್ನು ನನಗೆ ಕೊಟ್ಟು ಹೀಗೆ ತಿಳಿಸಲಾಯಿತು, “ನೀನೆದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಅಳತೆಮಾಡಿ ಆಲಯದಲ್ಲಿ ಆರಾಧನೆಮಾಡುವವರನ್ನು ಎಣಿಕೆಮಾಡು. 2ಆಲಯದ ಹೊರಗಿರುವ ಹೊರಾಂಗಣವನ್ನು ಅಳೆಯದೆ ಬಿಟ್ಟುಬಿಡು, ಅದು ಅನ್ಯಜನರಿಗಾಗಿ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಲವತ್ತೆರಡು ತಿಂಗಳು ತುಳಿದಾಡುವರು. 3ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟುಗಳನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.” 4ಭೂಲೋಕದ ಒಡೆಯನ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಮತ್ತು ಎರಡು ದೀಪಸ್ತಂಭಗಳೂ ಇವರೇ. 5ಇವರಿಗೆ ಯಾವನಾದರೂ ಕೇಡನ್ನುಂಟುಮಾಡಬೇಕೆಂದಿದ್ದರೆ ಇವರ ಬಾಯೊಳಗಿಂದ ಬೆಂಕಿಯು ಹೊರಟು ಇವರ ಶತ್ರುಗಳನ್ನು ದಹಿಸಿಬಿಡುವುದು. ಇವರಿಗೆ ಕೇಡನ್ನು ಉಂಟುಮಾಡಬಯಸುವವರಿಗೆ ಆ ರೀತಿಯಾಗಿ ಹತರಾಗಬೇಕು. 6ಅವರು ಪ್ರವಾದಿಸುವ ದಿನಗಳಲ್ಲಿ ಮಳೆಬೀಳದಂತೆ ಆಕಾಶವನ್ನು ಮುಚ್ಚುವ ಅಧಿಕಾರ ಅವರಿಗೆ ಇರುವುದು. ಇದಲ್ಲದೆ ಅವರಿಗೆ ಇಷ್ಟಬಂದಾಗೆಲ್ಲಾ ನೀರು ರಕ್ತವಾಗುವಂತೆ ಮಾಡುವುದಕ್ಕೂ ಸಕಲ ವಿಧವಾದ ಉಪದ್ರವಗಳಿಂದ ಭೂಮಿಯನ್ನು ಹಿಂಸಿಸುವುದಕ್ಕೂ ಅಧಿಕಾರವುಂಟು. 7ಅವರು ತಮ್ಮ ಸಾಕ್ಷಿಗಳನ್ನು ಹೇಳಿ ಮುಗಿಸಿದ ನಂತರ, ಅಧೋಲೋಕದಿಂದ ಬರುವ ಮೃಗವು ಇವರ ಮೇಲೆ ಯುದ್ಧಮಾಡಿ ಇವರನ್ನು ಜಯಿಸಿ ಕೊಲ್ಲುವುದು. 8ಈ ಸಾಕ್ಷಿಗಳ ಶವಗಳು ಮಹಾ ಪಟ್ಟಣದ ಬೀದಿಯಲ್ಲಿ ಬಿದ್ದಿರುವವು. ಆ ಪಟ್ಟಣಕ್ಕೆ ಸಾಂಕೇತಿಕವಾಗಿ ಸೊದೋಮ್ ಎಂದು, ಐಗುಪ್ತ ಎಂದೂ ಹೆಸರುಗಳುಂಟು. ಇವರ ಒಡೆಯನು ಸಹ ಅಲ್ಲಿಯೇ ಶಿಲುಬೆಗೆ ಹಾಕಲ್ಪಟ್ಟಿದ್ದನು. 9ಸಕಲ ಜನ, ಕುಲ, ಭಾಷೆ, ಜನಾಂಗಗಳಿಗೆ ಸೇರಿದವರು ಈ ಸಾಕ್ಷಿಗಳ ಶವಗಳನ್ನು ಮೂರುವರೆ ದಿನಗಳವರೆಗೂ ನೋಡುವರು ಮತ್ತು ಅವರ ಶವಗಳನ್ನು ಸಮಾಧಿಯಲ್ಲಿ ಇಡಗೊಡಿಸುವುದಿಲ್ಲ. 10ಈ ಇಬ್ಬರು ಪ್ರವಾದಿಗಳು ಭೂನಿವಾಸಿಗಳನ್ನು ಹಿಂಸಿಸಿದ್ದರಿಂದ ಇವರು ಸತ್ತದ್ದಕ್ಕೆ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ಉಡುಗೊರೆಗಳನ್ನು ಕಳುಹಿಸುವರು. 11ಮೂರುವರೆ ದಿನಗಳಾದ ಮೇಲೆ ದೇವರಿಂದ ಜೀವಶ್ವಾಸವು ಬಂದು ಆ ಶವಗಳಲ್ಲಿ ಪ್ರವೇಶಿಸಲು, ಅವರು ಕಾಲೂರಿ ನಿಲ್ಲುವರು. ಅವರನ್ನು ನೋಡಿದವರೆಲ್ಲರೂ ಭಯದಿಂದ ನಡುಗಿದರು. 12ಅನಂತರ ಅವರಿಗೆ, “ಇಲ್ಲಿ ಮೇಲಕ್ಕೆ ಏರಿ ಬನ್ನಿರಿ!” ಎಂದು ಆಕಾಶದಿಂದ ಮಹಾ ವಾಣಿಯು ತಿಳಿಸಿತು. ಅದನ್ನು ಕೇಳಿ ಅವರು ಮೇಘದಲ್ಲಿ ಪರಲೋಕಕ್ಕೆ ಏರಿಹೋದರು. ಅವರ ಶತ್ರುಗಳು ಅವರನ್ನು ನೋಡುತ್ತಾ ಇದ್ದರು. 13ಅದೇ ಗಳಿಗೆಯಲ್ಲಿ ಮಹಾ ಭೂಕಂಪವುಂಟಾಗಿ ಆ ಪಟ್ಟಣದ ಹತ್ತರಲ್ಲೊಂದಂಶವು ಬಿದ್ದುಹೋಯಿತು. ಆ ಭೂಕಂಪದಿಂದ ಏಳು ಸಾವಿರ ಮಂದಿ ಸತ್ತು ಹೋದರು. ಉಳಿದವರು ಭಯಗ್ರಸ್ತರಾಗಿ ಪರಲೋಕದ ದೇವರನ್ನು ಘನಪಡಿಸಿದರು. 14ಎರಡನೆಯ ವಿಪತ್ತು ಕಳೆದುಹೋಯಿತು. ಇಗೋ, ಮೂರನೆಯ ವಿಪತ್ತು ಬೇಗನೆ ಬರುತ್ತಿದೆ. 15ಏಳನೆಯ ದೇವದೂತನು ತುತ್ತೂರಿಯನ್ನೂದಿದನು. ಆಗ ಪರಲೋಕದಲ್ಲಿ ಮಹಾಶಬ್ದಗಳುಂಟಾಗಿ, “ಲೋಕದ ರಾಜ್ಯಾಧಿಕಾರವು ನಮ್ಮ ಕರ್ತನಿಗೂ ಆತನ ಕ್ರಿಸ್ತನಿಗೂ ಬಂದಿದೆ, ಆತನು ಯುಗಯುಗಾಂತರಗಳಲ್ಲಿಯೂ ರಾಜ್ಯವನ್ನಾಳುವನು” ಎಂಬ ಮಹಾಘೋಷಣೆಯಾಯಿತು. 16ತರುವಾಯ ದೇವರ ಸಮಕ್ಷಮದಲ್ಲಿ ತಮ್ಮ ತಮ್ಮ ಸಿಂಹಾಸನಗಳ ಮೇಲೆ ಕುಳಿತಿದ್ದ ಇಪ್ಪತ್ನಾಲ್ಕು ಮಂದಿ ಹಿರಿಯರು ಆತನಿಗೆ ಅಡ್ಡಬಿದ್ದು, 17“ಕರ್ತನೇ, ಸರ್ವಶಕ್ತನಾದ ದೇವರೇ, ಇರುವಾತನೇ ಇದ್ದಾತನೇ, ನೀನು ನಿನ್ನ ಮಹಾ ಅಧಿಕಾರವನ್ನು ವಹಿಸಿಕೊಂಡು ಆಳುತ್ತಿರುವುದರಿಂದ ನಾವು ನಿನಗೆ ಕೃತಜ್ಞತಾಸುತ್ತಿ ಸಲ್ಲಿಸುತ್ತೇವೆ. 18ಜನಾಂಗಗಳು ಕೋಪಿಸಿಕೊಂಡವು. ನಿನ್ನ ಕೋಪವೂ ಪ್ರಕಟವಾಯಿತು. ಸತ್ತವರು ತೀರ್ಪುಹೊಂದುವ ಸಮಯವು ಬಂದಿದೆ. ನೀನು ನಿನ್ನ ದಾಸರಾದ ಪ್ರವಾದಿಗಳಿಗೂ, ದೇವಜನರಿಗೂ, ನಿನ್ನ ನಾಮಕ್ಕೆ ಭಯಪಡುವ ಹಿರಿಯರೂ ಕಿರಿಯರೂ ಆಗಿರುವ ನಿನ್ನ ಭಕ್ತರಿಗೆ ಪ್ರತಿಫಲವನ್ನು ಕೊಡುವುದಕ್ಕೂ ಲೋಕನಾಶಕರನ್ನು ವಿನಾಶಗೊಳಿಸುವ ಕಾಲವು ಬಂದಿದೆ” ಎಂದು ಆತನನ್ನು ಆರಾಧಿಸಿದರು. 19ಆಗ ಪರಲೋಕದಲ್ಲಿರುವ ದೇವಾಲಯವು ತೆರೆಯಿತು. ಆತನ ಆಲಯದಲ್ಲಿ ಆತನ ಒಡಂಬಡಿಕೆಯ ಮಂಜೂಷವು ಕಾಣಿಸಿತು. ಇದಲ್ಲದೆ, ಗರ್ಜನೆ, ಗುಡುಗು, ಮಿಂಚುಗಳು, ಭೂಕಂಪವು, ದೊಡ್ಡ ಆಲಿಕಲ್ಲಿನ ಮಳೆಯೂ ಸುರಿಯಿತು.

Keep going

Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..

Books

✦ Explain this verse with AI AI explanations, Bible Q&A, characters, maps and more — in the Truth of Bible app →

Reading settings

Theme
Text size
100%
Layout

Loading the Bibles…

Your choice is remembered on this device and used for reading, search and the verse screen.