Indian Revised Version — Kannada (2019)
ಕೀರ್ತನೆಗಳು 58
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ದಾವೀದನ ಕಾವ್ಯ. ಅಧಿಕಾರಿಗಳೇ, ನೀವು ಕೊಡುವ ತೀರ್ಪುಗಳು ನೀತಿಗನುಸಾರವಾಗಿವೆಯೋ? ಜನರ ವ್ಯಾಜ್ಯಗಳನ್ನು ನ್ಯಾಯಯುತವಾಗಿ ಬಗೆಹರಿಸುತ್ತಿರೋ? 2ನಿಮ್ಮ ಮನಸ್ಸಿನ ಕಲ್ಪನೆಯೆಲ್ಲಾ ಕೆಟ್ಟತನವೇ; ನೀವು ದೇಶದವರಿಗೆ ಅನ್ಯಾಯವನ್ನೇ ತೂಗಿಕೊಡುವವರಾಗಿದ್ದೀರಲ್ಲಾ. 3ದುಷ್ಟರು ಜನ್ಮದಿಂದಲೇ ಧರ್ಮಭ್ರಷ್ಟರು; ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿ ದಾರಿ ತಪ್ಪಿದವರು. 4ಅವರು ಸರ್ಪದಂತೆ ವಿಷಭರಿತರು. 5ಜಾಣತನದಿಂದ ಮಂತ್ರಿಸುವ ಹಾವಾಡಿಗರ ನಾಗಸ್ವರಕ್ಕೂ ಮರುಳಾಗದ ಅಥವಾ ಅದಕ್ಕೆ ಕಿವಿಗೊಡದ ಕಳ್ಳ ಹಾವಿನಂತೆ ಇರುತ್ತಾರೆ. 6ದೇವರೇ, ಅವರ ಹಲ್ಲುಗಳನ್ನು ಮುರಿದುಬಿಡು; ಯೆಹೋವನೇ, ಪ್ರಾಯದ ಸಿಂಹಗಳ ಕೋರೆ ಹಲ್ಲುಗಳನ್ನು ಕಿತ್ತುಹಾಕು. 7ಕ್ಷಣದಲ್ಲಿ ಹರಿದು ಕಾಣದೆ ಹೋಗುವ ನೀರಿನಂತೆ ಅವರು ಮಾಯವಾಗಲಿ; ಬಾಣ ತಾಗಿತೋ ಎಂಬಂತೆ ಅವರು ಬೀಳಲಿ. 8ಒಣಗಿ ಸತ್ತ ಬಸವನಹುಳದಂತೆ ನಿರ್ನಾಮವಾಗಲಿ; ಗರ್ಭವಿಳಿದ ಪಿಂಡದಂತೆ ಸೂರ್ಯನನ್ನು ನೋಡದೆ ಹೋಗಲಿ. 9ಇನ್ನೂ ಹಸಿರಿರುರುವಾಗಲೇ ಒಲೆಗೆ ಹಾಕಿದ ಮುಳ್ಳಿನ ಕೊಂಪೆಯನ್ನು ಬಿರುಗಾಳಿಯು ಹಾರಿಸಿಬಿಡುವಂತೆ ದೇವರ ಉಗ್ರಕೋಪವು ಅವರನ್ನು ನಿಶ್ಶೇಷಮಾಡಲಿ. 10ದುಷ್ಟರಿಗಾಗುವ ಪ್ರತಿದಂಡನೆಯನ್ನು ಭಕ್ತರು ನೋಡಿ ಹರ್ಷಿಸಿ, ಅವರ ರಕ್ತದಲ್ಲಿ ಕಾಲಾಡಿಸುವರು. 11ನೀತಿವಂತನಿಗೆ ಫಲವುಂಟೆಂತಲೂ, ಲೋಕದಲ್ಲಿ ನ್ಯಾಯಸ್ಥಾಪಕನಾದ ದೇವರು ಇದ್ದಾನೆಂತಲೂ ಸರ್ವರು ಒಪ್ಪಿಕೊಳ್ಳುವರು.
This chapter is not in this version.
Keep going
Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..