Skip to content

Indian Revised Version — Kannada (2019)

ಕೀರ್ತನೆಗಳು 55

1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ತಂತಿವಾದ್ಯದೊಡನೆ ಹಾಡತಕ್ಕದ್ದು; ದಾವೀದನ ಪದ್ಯ. ದೇವರೇ, ನನ್ನ ಮೊರೆಯನ್ನು ಲಾಲಿಸು; ನನ್ನ ವಿಜ್ಞಾಪನೆಗೆ ಕಿವಿಮುಚ್ಚಿಕೊಳ್ಳಬೇಡ. 2ನನ್ನ ಕಡೆಗೆ ಲಕ್ಷ್ಯಕೊಟ್ಟು ಸದುತ್ತರವನ್ನು ದಯಪಾಲಿಸು. 3ಶತ್ರುಗಳ ಅಬ್ಬರ, ದುಷ್ಟರ ಹಿಂಸೆ ಇವುಗಳ ದೆಸೆಯಿಂದ ಪ್ರಲಾಪಿಸುವವನಾಗಿ, ಹೊಯ್ದಾಡುತ್ತಾ ನರಳುತ್ತಿದ್ದೇನೆ. ಅವರು ನನ್ನ ಮೇಲೆ ಅಪಾಯವನ್ನು ಬರಮಾಡಿ, ಕೋಪದಿಂದ ನನ್ನನ್ನು ದ್ವೇಷಿಸುತ್ತಾರೆ. 4ನನ್ನ ಹೃದಯವು ನೊಂದು ಬೆಂದುಹೋಗಿದೆ; ಮರಣಭಯವು ನನ್ನನ್ನು ಆವರಿಸಿಕೊಂಡಿದೆ. 5ಅಂಜಿ ನಡುಗುತ್ತಿದ್ದೇನೆ; ದಿಗಿಲು ನನ್ನನ್ನು ಹಿಡಿದಿದೆ. 6ನಾನು, “ಆಹಾ, ನನಗೆ ರೆಕ್ಕೆಗಳಿದ್ದರೆ ಪಾರಿವಾಳದಂತೆ ಹಾರಿಹೋಗಿ ಆಶ್ರಯ ಸೇರಿಕೊಳ್ಳುತ್ತಿದ್ದೆನು. 7ಅವಸರದಿಂದ ಹಾನಿಕರವಾದ ಬಿರುಗಾಳಿಯಿಂದ ತಪ್ಪಿಸಿಕೊಂಡು, 8ದೂರ ಹೋಗಿ ಅರಣ್ಯಸ್ಥಳದಲ್ಲಿ ಪ್ರವಾಸಿಯಾಗಿರುತ್ತಿದ್ದೆನು” ಅಂದುಕೊಂಡೆನು. ಸೆಲಾ 9ಕರ್ತನೇ, ಅವರ ಭಾಷೆಯನ್ನು ತಾರುಮಾರುಮಾಡಿ ಅವರನ್ನು ಭ್ರಾಂತಿಗೊಳಿಸು. ಪಟ್ಟಣದಲ್ಲಿ ಕಲಹ, ಬಲಾತ್ಕಾರಗಳು ಕಾಣಬರುತ್ತವೆ. 10ಅವೇ ಅದರ ಪೌಳಿಗೋಡೆಗಳ ಮೇಲೆ ಹಗಲಿರುಳು ಸುತ್ತುತ್ತಿರುವ ಕಾವಲುಗಾರರು; ಊರೊಳಗೆ ಕೇಡು, ತೊಂದರೆಗಳು ಪ್ರಬಲವಾಗಿವೆ. 11ಅದರೊಳಗೆಲ್ಲಾ ನಾಶನವೇ; ದಬ್ಬಾಳಿಕೆ ಮತ್ತು ವಂಚನೆ ಅದರ ಬೀದಿಗಳಿಂದ ತೊಲಗವು. 12ನನ್ನನ್ನು ದೂಷಿಸುವವನು ವೈರಿಯಾಗಿದ್ದರೆ ತಾಳಿಕೊಂಡೇನು; ನನ್ನನ್ನು ತಿರಸ್ಕರಿಸಿ ಉಬ್ಬಿಕೊಳ್ಳುವವನು ದ್ವೇಷಿಯಾಗಿದ್ದರೆ ಅಡಗಿಕೊಂಡೆನು. 13ಆದರೆ ನೀನು ನನಗೆ ಸ್ವಕೀಯನೂ ಆಪ್ತಮಿತ್ರನೂ ಅಲ್ಲವೇ. 14ನಾವು ಪರಸ್ಪರವಾಗಿ ರಸಭರಿತ ಸಂಭಾಷಣೆ ಮಾಡುತ್ತಾ ಭಕ್ತಸಮೂಹದೊಡನೆ ದೇವಾಲಯಕ್ಕೆ ಹೋಗುತ್ತಿದ್ದೆವಲ್ಲಾ. 15ಆ ದುಷ್ಟರಿಗೆ ಮರಣವು ತಟ್ಟನೆ ಬರಲಿ; ಸಜೀವರಾಗಿಯೇ ಪಾತಾಳಕ್ಕೆ ಇಳಿದುಹೋಗಲಿ. ಅವರ ಮನೆಯಲ್ಲಿಯೂ, ಮನಸ್ಸಿನಲ್ಲಿಯೂ ಕೆಟ್ಟತನವೇ ತುಂಬಿದೆ. 16ನಾನಂತೂ ದೇವರಾದ ಯೆಹೋವನಿಗೆ ಮೊರೆಯಿಡುವೆನು; ಆತನು ನನ್ನನ್ನು ರಕ್ಷಿಸುವನು. 17ತ್ರಿಕಾಲದಲ್ಲಿಯೂ ಹಂಬಲಿಸುತ್ತಾ ಮೊರೆಯಿಡುವೆನು. ಆತನು ಹೇಗೂ ನನ್ನ ಮೊರೆಯನ್ನು ಕೇಳಿ 18ನನ್ನ ವಿರೋಧಿಗಳು ಅನೇಕರಿದ್ದರೂ ಅವರು ನನ್ನನ್ನು ಮುಟ್ಟದಂತೆ ಸುರಕ್ಷಿತವಾಗಿ ಇಡುವನು. 19ಅನಾದಿಕಾಲದಿಂದ ಆಸನಾರೂಢನಾಗಿರುವ ದೇವರು ಲಕ್ಷ್ಯವಿಟ್ಟು ಅವರನ್ನು ತಗ್ಗಿಸಿಬಿಡುವನು. ಸೆಲಾ ಅವರು ತಮ್ಮ ಸುಖವು ಕದಲದೆಂದುಕೊಂಡು ದೇವರಿಗೆ ಹೆದರುವುದಿಲ್ಲ. 20ಆ ದ್ರೋಹಿಯಾದರೋ ತನ್ನೊಡನೆ ಸಮಾಧಾನದಿಂದಿದ್ದವರ ಮೇಲೆ ವಿರುದ್ಧವಾಗಿ ಕೈಯೆತ್ತಿ ತಾನು ಮಾಡಿಕೊಂಡ ಒಡಂಬಡಿಕೆಯನ್ನು ಭಂಗಪಡಿಸಿದ್ದಾನೆ. 21ಅವನ ಮಾತು ಬೆಣ್ಣೆಯಂತೆ ನುಣುಪು; ಹೃದಯವೋ ಕಲಹಮಯ. ಅವನ ನುಡಿಗಳು ಎಣ್ಣೆಗಿಂತ ನಯವಾಗಿದ್ದರೂ ಬಿಚ್ಚು ಕತ್ತಿಗಳೇ ಸರಿ. 22ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು. 23ದೇವರೇ, ನೀನು ದುಷ್ಟರನ್ನು ಪಾತಾಳದ ಕೆಳಕ್ಕೆ ದೊಬ್ಬಿಬಿಡುವಿ. ಕೊಲೆಪಾತಕರೂ ವಂಚಕರೂ ನರಾಯುಷ್ಯದ ಅರ್ಧಾಂಶವಾದರೂ ಬದುಕುವುದಿಲ್ಲ. ನಾನಂತೂ ನಿನ್ನನ್ನೆ ನಂಬಿಕೊಂಡಿರುವೆನು.

Keep going

Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..

Books

✦ Explain this verse with AI AI explanations, Bible Q&A, characters, maps and more — in the Truth of Bible app →

Reading settings

Theme
Text size
100%
Layout

Loading the Bibles…

Your choice is remembered on this device and used for reading, search and the verse screen.