Indian Revised Version — Kannada (2019)
ಕೀರ್ತನೆಗಳು 39
1ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಯೆದೂತೂನನ ರಾಗದ ಪ್ರಕಾರ ಹಾಡತಕ್ಕದ್ದು; ದಾವೀದನ ಕೀರ್ತನೆ. “ನನ್ನ ನಾಲಿಗೆ ಪಾಪಕ್ಕೆ ಹೋಗದಂತೆ ಜಾಗರೂಕನಾಗಿರುವೆನು, ದುಷ್ಟರು ನನ್ನ ಮುಂದೆ ಇರುವಾಗ ಬಾಯಿಗೆ ಕಡಿವಾಣ ಹಾಕಿಕೊಂಡಿರುವೆನು” ಅಂದುಕೊಂಡೆನು. 2ನಾನು ಮೌನವಾಗಿದ್ದೆನು; ಒಳ್ಳೆಯದನ್ನಾದರೂ ಆಡದೆ ಸುಮ್ಮನಿದ್ದೆನು; ಆದರೆ ನನ್ನ ಸಂಕಟವು ಹೆಚ್ಚಿತು. 3ನನ್ನ ಹೃದಯವು ಆತಂಕದಿಂದ ಕೂಡಿತ್ತು; ನಾನು ಹೆಚ್ಚಾಗಿ ಯೋಚಿಸುತ್ತಿರುವಲ್ಲಿ ತಾಪ ಹೆಚ್ಚಿತು. ಆಗ ನಾನು ಬಾಯಿ ಬಿಟ್ಟು, 4“ಯೆಹೋವನೇ, ನನಗೆ ಅವಸಾನವುಂಟೆಂದೂ, ನನ್ನ ಜೀವಮಾನವು ಅತ್ಯಲ್ಪವೆಂದೂ, ನಾನು ಎಷ್ಟೋ ಅಸ್ಥಿರನೆಂದೂ ನನಗೆ ತಿಳಿಯಪಡಿಸು. 5ನನ್ನ ಆಯುಷನ್ನು ಗೇಣುದ್ದವಾಗಿ ಮಾಡಿದ್ದೀಯಲ್ಲಾ; ನನ್ನ ಜೀವಿತಕಾಲ ನಿನ್ನ ಎಣಿಕೆಯಲ್ಲಿ ಏನೂ ಅಲ್ಲ” ಅಂದೆನು. ಮನುಷ್ಯನೆಂಬವನು ಎಷ್ಟು ಸ್ಥಿರನೆಂದು ಕಂಡರೂ ಬರಿ ಉಸಿರೇ. ಸೆಲಾ 6ನರರು ಮಾಯಾರೂಪವಾದ ನೆರಳಿನಂತೆ ಸಂಚರಿಸುವವರು; ಅವರು ಸುಮ್ಮಸುಮ್ಮನೆ ಗಡಿಬಿಡಿಮಾಡುವವರು; ಆಸ್ತಿಯನ್ನು ಕೂಡಿಸಿಟ್ಟುಕೊಳ್ಳುತ್ತಾರೆ, ಆದರೆ ಅದು ಯಾರ ಪಾಲಾಗುವುದೋ ತಾವೇ ತಿಳಿಯರು. 7“ಹೀಗಿರಲಾಗಿ ಕರ್ತನೇ, ನಾನು ಇನ್ನು ಯಾವುದಕ್ಕೆ ಕಾದುಕೊಳ್ಳಲಿ? ನೀನೇ ನನ್ನ ನಿರೀಕ್ಷೆ. 8ಎಲ್ಲಾ ದ್ರೋಹಗಳಿಂದ ನನ್ನನ್ನು ಬಿಡುಗಡೆಮಾಡು; ಮೂರ್ಖರ ನಿಂದೆಗೆ ಗುರಿಮಾಡಬೇಡ. 9ನೀನೇ ಇದನ್ನು ಬರಮಾಡಿದ್ದರಿಂದ ನಾನು ಏನೂ ಹೇಳದೆ ಮೌನವಾಗಿರುವೆನು. 10ನಿನ್ನ ದಂಡನೆಯನ್ನು ತೊಲಗಿಸು; ನಿನ್ನ ಕೈಹೊಡೆತದಿಂದ ಸಾಯುವ ಹಾಗಿದ್ದೇನಲ್ಲಾ. 11ನೀನು ನರನನ್ನು ಪಾಪದ ನಿಮಿತ್ತ ಗದರಿಸಿ ಶಿಕ್ಷಿಸುವಾಗ, ಅವನ ಚೆಲುವಿಕೆಯು ನುಸಿ ಹತ್ತಿತೋ ಎಂಬಂತೆ ಹಾಳಾಗಿ ಹೋಗುತ್ತದೆ. ಮನುಷ್ಯನೆಂಬವನು ಬರಿ ಉಸಿರೇ. ಸೆಲಾ 12ಯೆಹೋವನೇ, ನನ್ನ ಪ್ರಾರ್ಥನೆಯನ್ನು ಲಾಲಿಸು; ನನ್ನ ಮೊರೆಗೆ ಕಿವಿಗೊಡು. ನನ್ನ ಕಣ್ಣೀರನ್ನು ನೋಡು, ಸುಮ್ಮನಿರಬೇಡ. ನನ್ನ ಪೂರ್ವಿಕರಂತೆಯೇ ನಾನು ನಿನ್ನ ಮರೆಹೊಕ್ಕಿರುವ ಪ್ರವಾಸಿಯೂ, ಪರದೇಶದವನೂ ಆಗಿದ್ದೇನಲ್ಲಾ. 13ನಾನು ಅಗಲಿ ಹೋಗಿ ಇಲ್ಲವಾಗುವುದಕ್ಕೆ ಮೊದಲು, ಸ್ವಲ್ಪ ಸಂತೋಷಪಡುವಂತೆ ನಿನ್ನ ಕೋಪದೃಷ್ಟಿಯನ್ನು ನನ್ನ ಕಡೆಯಿಂದ ತಿರುಗಿಸಿಕೊಳ್ಳಬೇಕು, ದೇವಾ.”
This chapter is not in this version.
Keep going
Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..