Skip to content

Indian Revised Version — Kannada (2019)

ಅರಣ್ಯಕಾಂಡ 31

1ಯೆಹೋವನು ಮೋಶೆಯ ಸಂಗಡ ಮಾತನಾಡಿ, 2“ನೀನು ಇಸ್ರಾಯೇಲರಿಗೋಸ್ಕರ ಮಿದ್ಯಾನ್ಯರಿಗೆ ಪ್ರತಿದಂಡನೆಯನ್ನು ಮಾಡಬೇಕು. ಅನಂತರ ನೀನು ಪೂರ್ವಿಕರ ಬಳಿಗೆ ಸೇರಬೇಕು” ಎಂದು ಹೇಳಿದನು. 3ಆಗ ಮೋಶೆಯು ಇಸ್ರಾಯೇಲರಿಗೆ, “ನಿಮ್ಮೊಳಗಿಂದ ಕೆಲವರು ಮಿದ್ಯಾನ್ಯರಿಗೆ ವಿರುದ್ಧವಾಗಿ ಯುದ್ಧಕ್ಕೆ ಸಿದ್ಧಮಾಡಿಕೊಳ್ಳಬೇಕು. ಯೆಹೋವನ ಪ್ರತಿದಂಡನೆಯನ್ನು ಅವರಿಗೆ ತೀರಿಸಬೇಕು. 4ಇಸ್ರಾಯೇಲರ ಒಂದೊಂದು ಕುಲದಿಂದ ಸಾವಿರ ಜನ ಭಟರನ್ನು ಮಿದ್ಯಾನ್ಯರಿಗೆ ವಿರುದ್ಧವಾಗಿ ಯುದ್ಧಕ್ಕೆ ಕಳುಹಿಸಬೇಕು.” 5ಆದಕಾರಣ ಇಸ್ರಾಯೇಲರು ಕುಲವೊಂದಕ್ಕೆ ಸಾವಿರ ಮಂದಿಯ ಮೇರೆಗೆ ಯುದ್ಧಕ್ಕೆ ಸನ್ನದ್ಧರಾದ ಹನ್ನೆರಡು ಸಾವಿರ ಮಂದಿಯನ್ನು ಎಣಿಕೆಮಾಡಿ ಕಳುಹಿಸಿದರು. 6ಮೋಶೆಯು ಇವರನ್ನು ಯುದ್ಧಕ್ಕೆ ಕಳುಹಿಸುವಾಗ ಕುಲವೊಂದಕ್ಕೆ ಸಾವಿರ ಭಟರನ್ನು, ಮಹಾಯಾಜಕನಾದ ಎಲ್ಲಾಜಾರನ ಮಗನಾದ ಫೀನೆಹಾಸನನ್ನು, ದೇವರ ಸಾಮಾನುಗಳನ್ನೂ, ಆಜ್ಞಾತುತೂರಿಗಳನ್ನೂ ತೆಗೆದುಕೊಂಡು ಅವರೊಡನೆ ಹೋಗಬೇಕೆಂದು ಆಜ್ಞಾಪಿಸಿದನು. 7ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಅವರು ಮಿದ್ಯಾನ್ಯರೊಡನೆ ಯುದ್ಧಮಾಡಿ ಗಂಡಸರೆಲ್ಲರನ್ನೂ ಸಂಹಾರಮಾಡಿದರು. 8ಖಡ್ಗದಿಂದ ಹತರಾದವರಲ್ಲಿ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ಯರ ಐದು ಮಂದಿ ರಾಜರು ಇದ್ದರು. ಅದಲ್ಲದೆ ಬೆಯೋರನ ಮಗನಾದ ಬಿಳಾಮನನ್ನು ಕೊಂದುಬಿಟ್ಟರು. 9ಇಸ್ರಾಯೇಲರು ಮಿದ್ಯಾನ್ಯರ ಎಲ್ಲಾ ಹೆಂಗಸರನ್ನೂ, ಮಕ್ಕಳನ್ನೂ ಸೆರೆಹಿಡಿದು ಎಲ್ಲಾ ದನಕುರಿಗಳನ್ನೂ, ಆಸ್ತಿಯನ್ನೂ ಸೂರೆಮಾಡಿದರು. 10ಅವರು ಇದ್ದ ಎಲ್ಲಾ ಊರುಗಳನ್ನೂ, ಪಾಳೆಯಗಳನ್ನೂ ಸುಟ್ಟುಬಿಟ್ಟರು. 11ಒಂದನ್ನೂ ಬಿಡದೆ ಮನುಷ್ಯರನ್ನೂ, ಪಶುಗಳನ್ನೂ ಸೆರೆಹಿಡಿದರು. 12ಮತ್ತು ಅವರು ಸೆರೆಯವರನ್ನೂ, ಪಶುಗಳನ್ನೂ, ಆಸ್ತಿಯನ್ನೂ ತೆಗೆದುಕೊಂಡು ಯೆರಿಕೋ ಪಟ್ಟಣದ ಎದುರಾಗಿ ಯೊರ್ದನ್ ನದಿಯ ತೀರದಲ್ಲಿ ಮೋವಾಬ್ಯರ ಮೈದಾನದಲ್ಲಿದ್ದ ಪಾಳೆಯಕ್ಕೆ ಮೋಶೆ, ಮಹಾಯಾಜಕನಾದ ಎಲ್ಲಾಜಾರ್ ಮತ್ತು ಇಸ್ರಾಯೇಲರ ಸರ್ವಸಮೂಹದವರ ಬಳಿಗೆ ಬಂದರು. 13ಮೋಶೆಯೂ, ಮಹಾಯಾಜಕನಾದ ಎಲ್ಲಾಜಾರನೂ, ಸಮೂಹದ ಪ್ರಧಾನರೂ ಪಾಳೆಯದ ಹೊರಗೆ ಹೋಗಿ ಅವರನ್ನು ಎದುರುಗೊಂಡರು. 14ಆಗ ಮೋಶೆಯು ಯುದ್ಧ ಭೂಮಿಯಿಂದ ಬಂದ ಸೈನ್ಯದ ಸಹಸ್ರಾಧಿಪತಿಗಳ ಮತ್ತು ಶತಾಧಿಪತಿಗಳ ಮೇಲೆ ಕೋಪಗೊಂಡನು. 15ಮೋಶೆಯು ಅವರಿಗೆ, “ನೀವು ಹೆಂಗಸರನ್ನೆಲ್ಲಾ ಉಳಿಸಿದ್ದೇನು? 16ಪೆಗೋರದ ಬಾಳನ ಸಂಗತಿಯಲ್ಲಿ ಬಿಳಾಮನ ಆಲೋಚನೆಯನ್ನು ಅನುಸರಿಸಿ ಇಸ್ರಾಯೇಲರನ್ನು ಯೆಹೋವನಿಗೆ ದ್ರೋಹಿಗಳನ್ನಾಗಿ ಮಾಡಿ ಸಮೂಹದವರಲ್ಲಿ ಘೋರವ್ಯಾಧಿ ಉಂಟಾಗುವಂತೆ ಮಾಡಿದವರು ಇವರೇ ಅಲ್ಲವೇ. 17ಆದಕಾರಣ ನೀವು ಈ ಗುಂಪಿನಲ್ಲಿರುವ ಎಲ್ಲಾ ಗಂಡು ಮಕ್ಕಳನ್ನೂ, ಪುರುಷ ಸಂಗಮಾಡಿದ ಎಲ್ಲಾ ಹೆಂಗಸರನ್ನೂ ಕೊಲ್ಲಬೇಕು. 18ಪುರುಷ ಸಂಗಮಾಡದಿರುವ ಕನ್ಯೆಯರನ್ನು ನಿಮಗೋಸ್ಕರ ಉಳಿಸಿಕೊಳ್ಳಬೇಕು. 19ನೀವಾದರೋ ಏಳು ದಿನದವರೆಗೂ ಪಾಳೆಯದ ಹೊರಗೆ ಇರಬೇಕು. ಮನುಷ್ಯ ಪ್ರಾಣತೆಗೆದವರೂ, ಶವಸೋಂಕಿದವರೂ, ನಿಮ್ಮವರಾದರೂ, ಸೆರೆಯವರಾದರೂ ಮೂರನೆಯ ಮತ್ತು ಏಳನೆಯ ದಿನಗಳಲ್ಲಿ ದೋಷಪರಿಹಾರ ಮಾಡಿಕೊಳ್ಳಬೇಕು. 20ಅದಲ್ಲದೆ ಎಲ್ಲಾ ಬಟ್ಟೆಗಳನ್ನೂ, ತೊಗಲಿನ ಸಾಮಾನನ್ನೂ, ಮೇಕೆ ಕೂದಲಿನ ವಸ್ತ್ರಗಳನ್ನು ಮರದ ವಸ್ತುಗಳನ್ನು ಶುದ್ಧ ಮಾಡಿಕೊಳ್ಳಬೇಕು” ಎಂದು ಹೇಳಿದನು. 21ಮಹಾಯಾಜಕನಾದ ಎಲ್ಲಾಜಾರನು ಯುದ್ಧಕ್ಕೆ ಹೋಗಿದ್ದ ಭಟರಿಗೆ ಹೀಗೆಂದನು, “ಯೆಹೋವನು ಮೋಶೆಗೆ ಅಪ್ಪಣೆಮಾಡಿದ ನಿಯಮ ಏನೆಂದರೆ, 22ಬೆಂಕಿಯನ್ನು ತಡೆಯುವ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ, ತವರ, ಸೀಸ ಮೊದಲಾದವುಗಳನ್ನು ಬೆಂಕಿದಾಟಿಸಿ ಶುದ್ಧಮಾಡಬೇಕು, 23ಅವುಗಳನ್ನು ಹೊಲೆ ಹೋಗಲಾಡಿಸುವ ನೀರಿನಿಂದಲೂ ಶುದ್ಧಮಾಡಬೇಕು. ಬೆಂಕಿಯಿಂದ ಸುಡಲಾರದ ವಸ್ತುಗಳನ್ನು ನೀರಿನಿಂದ ತೊಳೆದು ಶುದ್ಧಮಾಡಬೇಕು. 24ಏಳನೆಯ ದಿನದಲ್ಲಿ ನಿಮ್ಮ ಬಟ್ಟೆಗಳನ್ನು ಒಗೆದುಕೊಂಡ ನಂತರ ಶುದ್ಧರಾಗುವಿರಿ. ಆ ಮೇಲೆ ನೀವು ಪಾಳೆಯದೊಳಗೆ ಬರಬಹುದು” ಎಂದು ಹೇಳಿದನು. 25ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, 26“ನೀನೂ, ಮಹಾಯಾಜಕನಾದ ಎಲ್ಲಾಜಾರನೂ, ಕುಲಾಧಿಪತಿಗಳೂ ಸಮೂಹದವರ ಕೈಗೆ ಸಿಕ್ಕಿದ ಮನುಷ್ಯರನ್ನೂ, ಪಶುಗಳನ್ನೂ ಲೆಕ್ಕಿಸಿ, 27ಒಟ್ಟು ಎರಡು ಭಾಗಮಾಡಿ ಯುದ್ಧಕ್ಕೆ ಹೋದ ಭಟರಿಗೆ ಅರ್ಧವನ್ನೂ, ಮಿಕ್ಕ ಸಮೂಹದವರಿಗೆ ಅರ್ಧವನ್ನೂ ಹಂಚಿಕೊಡಬೇಕು. 28ಯುದ್ಧಕ್ಕೆ ಹೋದ ಭಟರಿಗೆ ಬರುವ ಭಾಗದಿಂದ ಮನುಷ್ಯ, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ನೀನು ಐನೂರರಲ್ಲಿ ಒಂದರ ಮೇರೆಗೆ ಯೆಹೋವನಿಗೆ ಕಪ್ಪವನ್ನು ಎತ್ತಬೇಕು. 29ಅವರ ಅರ್ಧಪಾಲಿನಿಂದ ಅದನ್ನು ತೆಗೆದುಕೊಂಡು ಯೆಹೋವನಿಗೆ ಅರ್ಪಣೆಯಾಗಿ ಮಹಾಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಬೇಕು. 30ಉಳಿದ ಇಸ್ರಾಯೇಲರಿಗೆ ಬರುವ ಭಾಗದಿಂದ ಮನುಷ್ಯ, ದನ, ಕತ್ತೆ, ಆಡು, ಕುರಿ ಇವುಗಳಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಯೆಹೋವನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಡಬೇಕು” ಎಂದು ಆಜ್ಞಾಪಿಸಿದನು. 31ಯೆಹೋವನ ಅಪ್ಪಣೆಯ ಮೇರೆಗೆ ಮೋಶೆಯೂ, ಮಹಾಯಾಜಕನಾದ ಎಲ್ಲಾಜಾರನೂ ಮಾಡಿದರು. 32ಭಟರು ತಂದ ಸುಲಿಗೆಯಲ್ಲಿ ಹಂಚಿಕೊಳ್ಳುವುದಕೋಸ್ಕರ ಉಳಿದದ್ದು ಎಷ್ಟೆಂದರೆ: ಕುರಿಗಳು - 6,75,000, 33ದನಗಳು - 72,000, 34ಕತ್ತೆಗಳು - 61,000, 35ಕನ್ಯೆಯರು - 32,000. 36ಯುದ್ಧಕ್ಕೆ ಹೋಗಿದ್ದ ಭಟರಿಗೆ ದೊರಕಿದ ಅರ್ಧ ಭಾಗವಾಗಿರುವ ಕುರಿಗಳು - 3,37,500. 37ಕುರಿಗಳಿಂದ ಯೆಹೋವನಿಗೆ ಬಂದ ಕಪ್ಪ - 675. 38ಹಾಗೆಯೇ ಅವರಿಗೆ ದೊರಕಿದ 36,000, ಎತ್ತುಗಳಲ್ಲಿ ಯೆಹೋವನಿಗೆ ಬಂದ ಕಪ್ಪ - 72. 39ಕತ್ತೆಗಳಲ್ಲಿ - 30,500 ಯೆಹೋವನಿಗೆ ಬಂದ ಕಪ್ಪ - 61 4016,000 ಕನ್ಯೆಯರಲ್ಲಿ, ಯೆಹೋವನಿಗೆ ಬಂದ ಕಪ್ಪ - 32 ಕನ್ಯೆಯರು. 41ಯೆಹೋವನ ಅಪ್ಪಣೆಯ ಮೇರೆಗೆ ಮೋಶೆ ಆ ಕಪ್ಪವನ್ನು ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಮಹಾಯಾಜಕನಾದ ಎಲ್ಲಾಜಾರನಿಗೆ ಒಪ್ಪಿಸಿದನು. 42ಇಸ್ರಾಯೇಲರ ಭಟರು ತಂದ ಸುಲಿಗೆಯಲ್ಲಿ ಮೋಶೆ ಪ್ರತ್ಯೇಕಿಸಿ ಹಂಚಿದ ಅರ್ಧ ಭಾಗ 43ಎಷ್ಟೆಂದರೆ - 3,37,500 ಆಡುಕುರಿಗಳು. 44ಎತ್ತುಗಳು - 36,000, 45ಕತ್ತೆಗಳು - 30,500, 46ಕನ್ಯೆಯರು - 16,000, ಇಷ್ಟು ಇಸ್ರಾಯೇಲ ಸಮೂಹದವರ ಪಾಲಿಗೆ ಬಂದವು. 47ಇವುಗಳಲ್ಲಿ ಮೋಶೆಯು ಯೆಹೋವನ ಅಪ್ಪಣೆಯ ಪ್ರಕಾರ ಇಸ್ರಾಯೇಲರಲ್ಲಿ ಐವತ್ತರಲ್ಲಿ ಒಂದರ ಮೇರೆಗೆ ತೆಗೆದುಕೊಂಡು ಯೆಹೋವನ ಗುಡಾರವನ್ನು ನೋಡಿಕೊಳ್ಳುವ ಲೇವಿಯರಿಗೆ ಕೊಟ್ಟನು. 48ಆಗ ದಂಡಿನ ಸಹಸ್ರಾಧಿಪತಿಗಳೂ ಮೋಶೆಯ ಬಳಿಗೆ ಬಂದು ಅವನಿಗೆ, 49“ನಿನ್ನ ದಾಸರಾದ ನಾವು ನಮ್ಮ ಅಧಿಕಾರದೊಳಗೆ ಇದ್ದ ಭಟರನ್ನು ಲೆಕ್ಕಿಸಲಾಗಿ ಒಬ್ಬನಾದರೂ ಕಡಿಮೆಯಾಗಿಲ್ಲವೆಂದು ಗೊತ್ತಾಯಿತು. 50ಆದಕಾರಣ ಯೆಹೋವನು ಕಾಪಾಡಿದ ನಮ್ಮ ಪ್ರಾಣಗಳಿಗೆ ಈಡಾಗಿ ಆತನಿಗೋಸ್ಕರ ಪ್ರಾಯಶ್ಚಿತ್ತ ಕಾಣಿಕೆಯಾಗಿ ನಮ್ಮಲ್ಲಿ ಒಬ್ಬೊಬ್ಬನು ತನಗೆ ಸಿಕ್ಕಿದ ಚಿನ್ನದ ಒಡವೆಗಳಲ್ಲಿ ತೋಳ್ಬಳೆ, ಕಡಗ, ಮುದ್ರೆಯುಂಗರ, ಮುರುವು, ಕಂಠಮಾಲೆ ಮುಂತಾದವುಗಳನ್ನು ತಂದಿದ್ದೇವೆ” ಎಂದರು. 51ಅವರು ಕೊಟ್ಟ ಆ ಚಿನ್ನದ ಒಡವೆಗಳನ್ನು ಮೋಶೆಯೂ, ಮಹಾಯಾಜಕ ಎಲ್ಲಾಜಾರನೂ ತೆಗೆದುಕೊಂಡರು. ಅವುಗಳೆಲ್ಲಾ ವಿಚಿತ್ರವಾದ ಆಭರಣಗಳು. 52ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ ಯೆಹೋವನಿಗೋಸ್ಕರ ಪ್ರತ್ಯೇಕಿಸಿ ಸಮರ್ಪಿಸಿದ ಕಾಣಿಕೆಯ ಒಟ್ಟು ತೂಕ - 16,750 ತೊಲೆ. 53ಅದಲ್ಲದೆ ದಂಡಿನವರೆಲ್ಲರೂ ಸ್ವಂತಕ್ಕಾಗಿ ಲೂಟಿಯನ್ನು ತೆಗೆದುಕೊಂಡರು. 54ಸಹಸ್ರಾಧಿಪತಿಗಳೂ, ಶತಾಧಿಪತಿಗಳೂ, ಕೊಟ್ಟ ಚಿನ್ನವನ್ನು ಮೋಶೆಯೂ, ಮಹಾಯಾಜಕ ಎಲ್ಲಾಜಾರನೂ ತೆಗೆದುಕೊಂಡು ಇಸ್ರಾಯೇಲರ ವಿಷಯದಲ್ಲಿ ಯೆಹೋವನಿಗೆ ಜ್ಞಾಪಕ ಮಾಡುವುದಕ್ಕಾಗಿ ದೇವದರ್ಶನದ ಗುಡಾರದೊಳಗೆ ತಂದರು.

Keep going

Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..

Books

✦ Explain this verse with AI AI explanations, Bible Q&A, characters, maps and more — in the Truth of Bible app →

Reading settings

Theme
Text size
100%
Layout

Loading the Bibles…

Your choice is remembered on this device and used for reading, search and the verse screen.