Skip to content

Indian Revised Version — Kannada (2019)

ಯಾಜಕಕಾಂಡ 3

1“‘ಯಾವನಾದರೂ ಸಮಾಧಾನಯಜ್ಞವನ್ನು ಮಾಡಬೇಕಾದರೆ ಅವನು ಸಮರ್ಪಿಸುವ ಪಶುವು ದನವಾಗಿದ್ದ ಪಕ್ಷಕ್ಕೆ ಅದು ಗಂಡಾಗಲಿ ಅಥವಾ ಹೆಣ್ಣಾಗಲಿ ಯೆಹೋವನ ದೃಷ್ಟಿಯಲ್ಲಿ ಪೂರ್ಣಾಂಗವಾಗಿಯೇ ಇರಬೇಕು. 2ಅವನು ಅದನ್ನು ಯೆಹೋವನ ಸನ್ನಿಧಿಗೆ ತಂದು ಅದರ ತಲೆಯ ಮೇಲೆ ಕೈಯನ್ನಿಟ್ಟು ದೇವದರ್ಶನದ ಗುಡಾರದ ಬಾಗಿಲಲ್ಲಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಬೇಕು. 3ಆ ಯಜ್ಞಪಶುವಿನ ಅಂಗಾಂಶದ ಕೊಬ್ಬನ್ನು, ಕರುಳುಗಳ ಮೇಲಣ ಎಲ್ಲಾ ಕೊಬ್ಬನ್ನು, 4ಎರಡು ಮೂತ್ರಪಿಂಡಗಳ ಮೇಲೆ, ಸೊಂಟದಲ್ಲಿರುವ ಕೊಬ್ಬನ್ನು, ಕಳಿಜದ ಹತ್ತಿರ ಮೂತ್ರಪಿಂಡದ ತನಕ ಇರುವ ಕೊಬ್ಬನ್ನು ತೆಗೆದು ಅವುಗಳನ್ನು ಯೆಹೋವನಿಗೆ ಹೋಮಮಾಡಬೇಕು. 5ಆರೋನನ ವಂಶದವರಾದ ಯಾಜಕರು ಅದನ್ನು ಯಜ್ಞವೇದಿಯಲ್ಲಿ ಉರಿಯುವ ಕಟ್ಟಿಗೆಯ ಮೇಲಿರುವ ಸರ್ವಾಂಗಹೋಮ ದ್ರವ್ಯದೊಡನೆ ಹೋಮಮಾಡಬೇಕು. ಅದು ಯೆಹೋವನಿಗೆ ಸುಗಂಧಹೋಮ ಆಗಿರುವುದು. 6“‘ಸಮಾಧಾನಯಜ್ಞಕ್ಕಾಗಿ ಯೆಹೋವನಿಗೆ ಸಮರ್ಪಿಸುವಂಥದು ಕುರಿ ಅಥವಾ ಆಡು ಆಗಿರುವ ಪಕ್ಷದಲ್ಲಿ, ಅದು ಗಂಡಾಗಲಿ ಅಥವಾ ಹೆಣ್ಣಾಗಲಿ ಪೂರ್ಣಾಂಗವಾಗಿರಬೇಕು. 7ಅದು ಕುರಿಯಾಗಿದ್ದರೆ ತಂದವನು ಅದನ್ನು ಯೆಹೋವನ ಸನ್ನಿಧಿಗೆ ತೆಗೆದುಕೊಂಡು ಬರಬೇಕು. 8ಅವನು ಅದರ ತಲೆಯ ಮೇಲೆ ಕೈಯನ್ನಿಟ್ಟು ದೇವದರ್ಶನದ ಗುಡಾರದ ಎದುರಾಗಿ ಅದನ್ನು ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಬೇಕು. 9ಆ ಸಮಾಧಾನಯಜ್ಞದ ಪಶುವಿನ ಕೊಬ್ಬನ್ನು ಯೆಹೋವನಿಗೋಸ್ಕರ ಹೋಮವಾಗಿ ಸಮರ್ಪಿಸಬೇಕು. ಹೇಗೆಂದರೆ, ಬಾಲದ ಕೊಬ್ಬನ್ನೆಲ್ಲಾ ಬೆನ್ನೆಲುಬಿನ ಬಳಿಯಿಂದ ತೆಗೆದುಬಿಟ್ಟು ಅದನ್ನು, ಅಂಗಾಂಶದ ಕೊಬ್ಬನ್ನು, ಕರುಳುಗಳ ಮೇಲಣ ಎಲ್ಲಾ ಕೊಬ್ಬನ್ನು, 10ಎರಡು ಮೂತ್ರಪಿಂಡಗಳನ್ನು, ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನು ಮತ್ತು ಕಳಿಜದ ಮೇಲೆ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನು ತೆಗೆಯಬೇಕು. 11ಯಾಜಕನು ಯಜ್ಞವೇದಿಯ ಮೇಲೆ ಅವುಗಳನ್ನು ಹೋಮಮಾಡಬೇಕು. ಅದು ಯೆಹೋವನಿಗೆ ಅಗ್ನಿಯ ಮೂಲಕವಾಗಿ ಅರ್ಪಿಸಿದ ಆಹಾರವಾಗುವುದು. 12“‘ಸಮರ್ಪಿಸುವಂಥದ್ದು ಆಡು ಆಗಿದ್ದರೆ ಅರ್ಪಿಸುವವನು ಅದನ್ನು ಯೆಹೋವನ ಸನ್ನಿಧಿಗೆ ತೆಗೆದುಕೊಂಡು ಬರಬೇಕು. 13ಅವನು ಅದರ ತಲೆಯ ಮೇಲೆ ಕೈಯನ್ನಿಟ್ಟು, ದೇವದರ್ಶನ ಗುಡಾರದ ಎದುರಾಗಿ ವಧಿಸಬೇಕು. ಆರೋನನ ವಂಶದವರಾದ ಯಾಜಕರು ಅದರ ರಕ್ತವನ್ನು ಯಜ್ಞವೇದಿಯ ಸುತ್ತಲೂ ಎರಚಬೇಕು. 14ಅದರ ಅಂಗಾಂಶದ ಕೊಬ್ಬನ್ನು ಮತ್ತು ಕರುಳುಗಳ ಮೇಲಣ ಎಲ್ಲಾ ಕೊಬ್ಬನ್ನು, 15ಎರಡು ಮೂತ್ರಪಿಂಡಗಳನ್ನು, ಇವುಗಳ ಮೇಲೆ ಸೊಂಟದಲ್ಲಿರುವ ಕೊಬ್ಬನ್ನು ಮತ್ತು ಕಳಿಜದ ಹತ್ತಿರ ಮೂತ್ರಪಿಂಡಗಳ ತನಕ ಇರುವ ಕೊಬ್ಬನ್ನು ಯೆಹೋವನಿಗೋಸ್ಕರ ಅಗ್ನಿಯ ಮೂಲಕ ಸಮರ್ಪಿಸಬೇಕು. 16ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಹೋಮಮಾಡಬೇಕು. ಅದು ಯೆಹೋವನಿಗೆ ಸುಗಂಧಹೋಮದ ರೂಪವಾಗಿ ಅರ್ಪಿಸಿದ ಆಹಾರವಾಗಿರುವುದು. ಯಜ್ಞಪಶುಗಳ ಕೊಬ್ಬೆಲ್ಲವೂ ಯೆಹೋವನದು. 17ಕೊಬ್ಬನ್ನಾಗಲಿ ಅಥವಾ ರಕ್ತವನ್ನಾಗಲಿ ತಿನ್ನಬಾರದೆಂಬುದು ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ನೀವು ವಾಸಿಸುವ ಎಲ್ಲಾ ಸ್ಥಳಗಳಲ್ಲಿಯೂ ಶಾಶ್ವತವಾದ ನಿಯಮವಾಗಿದೆ’” ಅಂದನು.

Keep going

Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..

Books

✦ Explain this verse with AI AI explanations, Bible Q&A, characters, maps and more — in the Truth of Bible app →

Reading settings

Theme
Text size
100%
Layout

Loading the Bibles…

Your choice is remembered on this device and used for reading, search and the verse screen.