Skip to content

Indian Revised Version — Kannada (2019)

ಯಾಜಕಕಾಂಡ 24

1ಯೆಹೋವನು ಮೋಶೆಯ ಸಂಗಡ ಮಾತನಾಡಿ, 2“ದೇವಸ್ಥಾನದಲ್ಲಿನ ದೀಪಗಳನ್ನು ಪ್ರತಿನಿತ್ಯವೂ ಉರಿಸುವುದಕ್ಕಾಗಿ ಇಸ್ರಾಯೇಲರು ಎಣ್ಣೆಮರದ ಕಾಯಿಗಳನ್ನು ಕುಟ್ಟಿ ತೆಗೆದ ನಿರ್ಮಲವಾದ ಎಣ್ಣೆಯನ್ನು ನಿನಗೆ ತಂದುಕೊಡಬೇಕೆಂದು ಅವರಿಗೆ ಆಜ್ಞಾಪಿಸು. 3ದೇವದರ್ಶನದ ಗುಡಾರದಲ್ಲಿ ಆಜ್ಞಾಶಾಸನಗಳ ಮಂಜೂಷದ ಪೆಟ್ಟಿಗೆಯ ಮುಂದಣ ತೆರೆಯ ಹೊರಗೆ, ಆ ದೀಪಗಳು ಯೆಹೋವನ ಸನ್ನಿಧಿಯಲ್ಲಿ ಸಾಯಂಕಾಲದಿಂದ ಬೆಳಗಿನ ಜಾವದ ವರೆಗೂ ಉರಿಯುತ್ತಿರುವಂತೆ ಆರೋನನು ಅವುಗಳನ್ನು ಸರಿಪಡಿಸಬೇಕು. ಇದು ನಿಮಗೂ ಮತ್ತು ನಿಮ್ಮ ಸಂತತಿಯವರಿಗೂ ಶಾಶ್ವತನಿಯಮ. 4ಅವನು ಪ್ರತಿನಿತ್ಯವೂ ಯೆಹೋವನ ಸನ್ನಿಧಿಯಲ್ಲಿ ಹಣತೆಗಳನ್ನು ಆ ಚೊಕ್ಕಬಂಗಾರದ ದೀಪಸ್ತಂಭದ ಮೇಲೆ ಸರಿಯಾಗಿ ಇಟ್ಟು ನಿರ್ವಹಿಸಬೇಕು. 5“ಅದಲ್ಲದೆ ನೀನು ಗೋದಿಯ ಹಿಟ್ಟಿನಿಂದ ಹನ್ನೆರಡು ರೊಟ್ಟಿಗಳನ್ನು ಮಾಡಬೇಕು; ಪ್ರತಿಯೊಂದು ರೊಟ್ಟಿಯು ಆರಾರು ಸೇರಿನದಾಗಿರಬೇಕು. 6ಅವುಗಳನ್ನು ಆರಾರು ರೊಟ್ಟಿಗಳ ಮೇರೆಗೆ ಎರಡು ರಾಶಿಗಳಾಗಿ, ಚೊಕ್ಕಬಂಗಾರದ ಮೇಜಿನ ಮೇಲೆ ಯೆಹೋವನ ಸನ್ನಿಧಿಯಲ್ಲಿ ಇಡಬೇಕು. 7ಒಂದೊಂದು ರಾಶಿಯ ಮೇಲೆ ಸ್ವಚ್ಛವಾದ ಧೂಪವನ್ನು ಇಡಬೇಕು. ಆ ರೊಟ್ಟಿಗಳ ನೈವೇದ್ಯವನ್ನು ಸೂಚಿಸುವುದಕ್ಕಾಗಿ ಆ ಧೂಪವೇ ಯೆಹೋವನಿಗೆ ಹೋಮಮಾಡಬೇಕು. 8ಯಾಜಕನು ಯಾವಾಗಲೂ ಪ್ರತಿ ಸಬ್ಬತ್ ದಿನದಲ್ಲಿ ರೊಟ್ಟಿಗಳನ್ನು ತಂದು ಯೆಹೋವನ ಸನ್ನಿಧಿಯಲ್ಲಿ ಕ್ರಮಪಡಿಸಬೇಕು. ಶಾಶ್ವತವಾದ ನಿಬಂಧನೆಯ ಮೇರೆಗೆ ಅವುಗಳನ್ನು ಇಸ್ರಾಯೇಲರಿಗೋಸ್ಕರ ಯೆಹೋವನಿಗೆ ಸಮರ್ಪಿಸಬೇಕು. 9ಅವು ಆರೋನನಿಗೂ ಮತ್ತು ಅವನ ಸಂತತಿಯವರಿಗೂ ಸಲ್ಲಬೇಕು. ಮಹಾಪರಿಶುದ್ಧವಾದ ಅವುಗಳನ್ನು ದೇವಸ್ಥಾನದ ಪ್ರಾಕಾರದಲ್ಲಿಯೇ ತಿನ್ನಬೇಕು. ಅವು ಯೆಹೋವನಿಗೆ ಸಮರ್ಪಿತವಾದ ಹೋಮದ್ರವ್ಯಗಳಿಗೆ ಸೇರಿದವುಗಳಾದುದರಿಂದ ಶಾಶ್ವತನಿಯಮದ ಪ್ರಕಾರ ಯಾಜಕರಿಗೇ ಸಲ್ಲಬೇಕು” ಅಂದನು. 10ಇಸ್ರಾಯೇಲ್ ಸ್ತ್ರೀಯಲ್ಲಿ ಐಗುಪ್ತ ಪುರುಷನಿಂದ ಹುಟ್ಟಿದವನೊಬ್ಬನು ಇಸ್ರಾಯೇಲರ ಪಾಳೆಯದಲ್ಲಿ, ಇಸ್ರಾಯೇಲನಾದ ಒಬ್ಬ ಮನುಷ್ಯನ ಸಂಗಡ ಜಗಳವಾಡುತ್ತಾ ಬಂದನು. 11ಅವನು ಯೆಹೋವನ ಹೆಸರನ್ನು ದೂಷಿಸಿ ಆತನನ್ನು ಶಪಿಸಿದ್ದರಿಂದ ಅವರು ಅವನನ್ನು ಮೋಶೆಯ ಬಳಿಗೆ ಹಿಡಿದು ಕರೆದುಕೊಂಡು ಬಂದರು. ಅವನ ತಾಯಿಯು ದಾನ್ ಕುಲದ ದಿಬ್ರೀಯ ಮಗಳಾದ ಶೆಲೋಮೀತ್ ಎಂಬುವವಳು. 12ಅವನ ವಿಷಯವಾಗಿ ಯೆಹೋವನ ತೀರ್ಪನ್ನು ತಿಳುಕೊಳ್ಳುವ ತನಕ ಅವನನ್ನು ಕಾವಲಲ್ಲಿರಿಸಿದರು. 13ಆಗ ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, 14“ದೂಷಿಸಿದ ಆ ಮನುಷ್ಯನನ್ನು ಪಾಳೆಯದ ಹೊರಗೆ ಒಯ್ಯಬೇಕು. ಅವನ ದೂಷಣೆಯ ಮಾತುಗಳನ್ನು ಕೇಳಿದವರೆಲ್ಲರೂ ಅವನ ತಲೆಯ ಮೇಲೆ ತಮ್ಮ ಕೈಗಳನ್ನಿಟ್ಟನಂತರ ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. 15ಮತ್ತು ನೀನು ಇಸ್ರಾಯೇಲರಿಗೆ ಹೀಗೆ ಹೇಳಬೇಕು, ‘ತನ್ನ ದೇವರನ್ನು ದೂಷಿಸಿದವನು ಆ ದೋಷದ ಫಲವನ್ನು ಅನುಭವಿಸಬೇಕು. 16ಯೆಹೋವನ ಹೆಸರನ್ನು ನಿಂದಿಸಿದವನಿಗೆ ಮರಣ ಶಿಕ್ಷೆಯಾಗಬೇಕು; ಸಮೂಹದವರೆಲ್ಲರೂ ಅವನನ್ನು ಕಲ್ಲೆಸೆದು ಕೊಲ್ಲಬೇಕು. ಅನ್ಯದೇಶಸ್ಥನೇ ಆಗಿರಲಿ ಅಥವಾ ಸ್ವದೇಶಸ್ಥನೇ ಆಗಿರಲಿ ಯೆಹೋವನ ಹೆಸರನ್ನು ನಿಂದಿಸಿದರೆ ಅವನಿಗೆ ಮರಣಶಿಕ್ಷೆಯಾಗಬೇಕು. 17“‘ಮನುಷ್ಯನನ್ನು ಕೊಂದವನಿಗೆ ಮರಣ ಶಿಕ್ಷೆಯಾಗಬೇಕು. 18ಪಶುವನ್ನು ಹೊಡೆದು ಕೊಂದವನಿಂದ ಅದಕ್ಕೆ ಪ್ರತಿಯಾಗಿ ಈಡನ್ನು ಕೊಡಿಸಬೇಕು, ಪ್ರಾಣಿಗೆ ಪ್ರತಿಯಾಗಿ ಪ್ರಾಣಿಯನ್ನು ಕೊಡಿಸಬೇಕು. 19ಯಾವನಾದರೂ ಮತ್ತೊಬ್ಬನನ್ನು ಅಂಗಹೀನಮಾಡಿದರೆ ಅವನು ಮಾಡಿದಂತೆಯೇ ಅವನಿಗೆ ಮಾಡಿಸಬೇಕು. 20ಅವಯವವನ್ನು ಮುರಿದವನಿಗೆ ಅವಯವವನ್ನು ಮುರಿಯುವುದೇ ಶಿಕ್ಷೆ. ಕಣ್ಣಿಗೆ ಪ್ರತಿಯಾಗಿ ಕಣ್ಣನ್ನೂ, ಹಲ್ಲಿಗೆ ಪ್ರತಿಯಾಗಿ ಹಲ್ಲನ್ನೂ ತೆಗೆಸಬೇಕು. ಮತ್ತೊಬ್ಬನನ್ನು ಅಂಗಹೀನ ಮಾಡಿದವನಿಗೆ ಈ ಪ್ರಕಾರ ಪ್ರತಿಕಾರ ಮಾಡಬೇಕು. 21ಪಶುವನ್ನು ಕೊಂದವನು ಅದಕ್ಕೆ ಬದಲಾಗಿ ಈಡು ಕೊಡಬೇಕು. ಮನುಷ್ಯನನ್ನು ಕೊಂದವನಿಗೆ ಮರಣಶಿಕ್ಷೆಯಾಗಬೇಕು. 22ಅನ್ಯರಿಗಾಗಲಿ ಅಥವಾ ಸ್ವದೇಶದವರಿಗಾಗಲಿ ಪಕ್ಷಪಾತವಿಲ್ಲದೆ ಒಂದೇ ನಿಯಮವಿರಬೇಕು. ನಾನು ನಿಮ್ಮ ದೇವರಾದ ಯೆಹೋವನು’” ಎಂಬುದೇ. 23ಮೋಶೆ ಈ ಮಾತುಗಳನ್ನು ಇಸ್ರಾಯೇಲರಿಗೆ ತಿಳಿಸಲಾಗಿ ಅವರು ದೂಷಿಸಿದವನಾದ ಆ ಮನುಷ್ಯನನ್ನು ಪಾಳೆಯದ ಹೊರಕ್ಕೆ ತೆಗೆದುಕೊಂಡು ಹೋಗಿ ಕಲ್ಲೆಸೆದು ಕೊಂದುಬಿಟ್ಟರು. ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲರು ಮಾಡಿದರು.

Keep going

Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..

Books

✦ Explain this verse with AI AI explanations, Bible Q&A, characters, maps and more — in the Truth of Bible app →

Reading settings

Theme
Text size
100%
Layout

Loading the Bibles…

Your choice is remembered on this device and used for reading, search and the verse screen.