Skip to content

Indian Revised Version — Kannada (2019)

ಆದಿಕಾಂಡ 40

1ಈ ಸಂಗತಿಗಳಾದ ಮೇಲೆ ಐಗುಪ್ತ ದೇಶದ ಅರಸನಾದ ಫರೋಹನಿಗೆ ಪಾನಗಳನ್ನು ಕೊಡುವವನೂ, ಆಹಾರಗಳನ್ನು ಮಾಡಿ ಕೊಡುವವನೂ ತಮ್ಮ ಅರಸನಿಗೆ ವಿರೋಧವಾಗಿ ಅಪರಾಧ ಮಾಡಿದರು. 2ಫರೋಹನು ಆ ಇಬ್ಬರು ಉದ್ಯೋಗಸ್ಥರ ಮೇಲೆ, ಅಂದರೆ ಪಾನದಾಯಕರಲ್ಲಿ ಮುಖ್ಯಸ್ಥನ ಮೇಲೆಯೂ ಅಡಿಗೆ ಭಟ್ಟರಲ್ಲಿ ಮುಖ್ಯಸ್ಥನ ಮೇಲೆಯೂ ಕೋಪಿಸಿಕೊಂಡು, 3ಅವರನ್ನು ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಲ್ಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸೆರೆಮನೆಯಾಗಿತ್ತು 4ಸೆರೆಮನೆಯ ಅಧಿಪತಿಯು ಯೋಸೇಫನನ್ನು ಅವರ ಉಪಚಾರಕ್ಕೆ ನೇಮಿಸಿದ್ದರಿಂದ ಯೋಸೇಫನು ಅವರಿಗೆ ಸೇವೆ ಮಾಡುವವನಾದನು. ಹೀಗೆ ಅವರು ಕೆಲವು ಕಾಲ ಸೆರೆಯಲ್ಲಿದ್ದರು. 5ಐಗುಪ್ತ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ಅಡಿಗೆ ಭಟ್ಟನಿಗೂ, ಒಂದೇ ರಾತ್ರಿ ಕನಸುಬಿತ್ತು. ಅವರವರ ಕನಸಿಗೆ ಬೇರೆ ಬೇರೆ ಅರ್ಥವಿತ್ತು. 6ಬೆಳಿಗ್ಗೆ ಯೋಸೇಫನು ಅವರ ಬಳಿಗೆ ಬಂದಾಗ ಅವರು ಬಹು ಚಿಂತೆಯುಳ್ಳವರಾಗಿ ಕಾಣಿಸಿದರು. 7ಅದನ್ನು ಅವನು ನೋಡಿ, “ನಿಮ್ಮ ಮುಖವು ಈ ಹೊತ್ತು ಏಕೆ ಕಳೆಗುಂದಿದೆ?” ಎಂದು ತನ್ನ ದಣಿಯ ಮನೆಯೊಳಗೆ ತನ್ನೊಂದಿಗೆ ಕಾವಲಲ್ಲಿದ್ದ ಫರೋಹನ ಉದ್ಯೋಗಸ್ಥರನ್ನು ಕೇಳಿದನು. 8ಅವರು ಅವನಿಗೆ, “ನಮಗೆ ಕನಸುಬಿತ್ತು. ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ” ಎಂದು ಹೇಳಲು ಯೋಸೇಫನು ಅವರಿಗೆ, “ಕನಸುಗಳ ಅರ್ಥವು ದೇವರಿಂದ ದೊರಕಬಹುದಲ್ಲವೇ? ದಯಮಾಡಿ ನಿಮ್ಮ ಕನಸನ್ನು ನನಗೆ ತಿಳಿಸಿರಿ” ಎಂದು ಹೇಳಿದನು. 9ಆಗ ಪಾನದಾಯಕರಲ್ಲಿ ಮುಖ್ಯಸ್ಥನು ಯೋಸೇಫನಿಗೆ, “ನನ್ನ ಕನಸಿನಲ್ಲಿ ಒಂದು ದ್ರಾಕ್ಷಾಲತೆಯನ್ನು ನನ್ನ ಮುಂದೆ ಕಂಡೆನು. 10ಅದಕ್ಕೆ ಮೂರು ದ್ರಾಕ್ಷಾಲತೆಯ ಕೊಂಬೆಗಳಿದ್ದವು. ಅದು ಚಿಗುರುತ್ತಲೇ ಹೂವುಗಳನ್ನು ಬಿಟ್ಟಿತು; ಆ ಹೂವುಗಳು ಗೊಂಚಲುಗಳಾಗಿ ಹಣ್ಣಾದವು. 11ಫರೋಹನ ಪಾನಪಾತ್ರೆಯು ನನ್ನ ಕೈಯಲ್ಲಿದ್ದದರಿಂದ ನಾನು ಆ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದು ಪಾತ್ರೆಯಲ್ಲಿ ಹಿಂಡಿ ಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸಿದೆನು” ಎಂದು ಹೇಳಿದನು. 12ಅದಕ್ಕೆ ಯೋಸೇಫನು, “ಆ ಕನಸಿನ ಅರ್ಥವೇನೆಂದರೆ, ಆ ಮೂರು ದ್ರಾಕ್ಷಾಲತೆಯ ಕೊಂಬೆಗಳೇ ಮೂರು ದಿನಗಳು. 13ಈ ಹೊತ್ತಿಗೆ ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಮೇಲಕ್ಕೆ ಎತ್ತಿ, ನಿನ್ನ ಉದ್ಯೋಗಕ್ಕೆ ಪುನಃ ನಿನ್ನನ್ನು ನೇಮಿಸುವನು. ನೀನು ಮೊದಲು ಫರೋಹನ ಪಾನದಾಯಕನಾಗಿದ್ದು ಅವನ ಕೈಗೆ ಪಾನಪಾತ್ರೆಯನ್ನು ಒಪ್ಪಿಸುತ್ತಿದ್ದಂತೆಯೇ ಮುಂದೆಯೂ ಒಪ್ಪಿಸುವಿ. 14ಆದರೆ ನೀನು ಸುಖದಿಂದಿರುವಾಗ ನನ್ನನ್ನು ಜ್ಞಾಪಕಮಾಡಿಕೊಂಡು ನನಗೆ ದಯೆ ತೋರಿಸಿ ಫರೋಹನಿಗೆ ನನ್ನ ಸಂಗತಿಯನ್ನು ತಿಳಿಸಿ ನನ್ನನ್ನು ಈ ಸೆರೆಯಿಂದ ಬಿಡಿಸಬೇಕು. 15ಏಕೆಂದರೆ ನಾನು ಇಬ್ರಿಯ ದೇಶದವನು. ಕೆಲವರು ನನ್ನನ್ನು ಕದ್ದು ಈ ದೇಶಕ್ಕೆ ತಂದರು. ಇಲ್ಲಿಯೂ ನಾನು ಯಾವ ತಪ್ಪು ಮಾಡದೆ ಸೆರೆಯಲ್ಲಿ ಬಿದ್ದಿರುವೆನು” ಅಂದನು. 16ಅವನು ಹೇಳಿದ ಅರ್ಥವು ಶುಭಕರವಾದದ್ದೆಂದು ಅಡಿಗೆಭಟ್ಟರಲ್ಲಿ ಮುಖ್ಯಸ್ಥನು ತಿಳಿದು ಯೋಸೇಫನಿಗೆ, ನಾನೂ ಕಂಡ ಕನಸನ್ನು ಹೇಳುತ್ತೇನೆ ಕೇಳು, “ನನಗೆ ಬಿದ್ದ ಕನಸಿನಲ್ಲಿ ಸೊಗಸಾದ ರೊಟ್ಟಿ ಪದಾರ್ಥಗಳು ತುಂಬಿದ್ದ ಮೂರು ಪುಟ್ಟಿಗಳು ನನ್ನ ತಲೆಯ ಮೇಲಿದ್ದವು. 17ಮೇಲಿನ ಪುಟ್ಟಿಯಲ್ಲಿ ಫರೋಹನಿಗೋಸ್ಕರ ಎಲ್ಲಾ ವಿಧವಾದ ರೊಟ್ಟಿ ಪದಾರ್ಥಗಳು ಇದ್ದವು. ಪಕ್ಷಿಗಳು ಬಂದು ಅವುಗಳನ್ನು ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿಂದಲೇ ತಿಂದುಹಾಕಿದವು” ಎಂದು ಹೇಳಿದನು. 18ಅದಕ್ಕೆ ಯೋಸೇಫನು, “ನಿನ್ನ ಕನಸಿನ ಅರ್ಥವೇನೆಂದರೆ, ಆ ಮೂರು ಪುಟ್ಟಿಗಳೇ ಮೂರು ದಿನಗಳು. 19ಈ ಹೊತ್ತಿಗೆ ಮೂರು ದಿನಗಳೊಳಗೆ ಫರೋಹನು ನಿನ್ನ ತಲೆಯನ್ನು ತೆಗೆಸುವನು, ನಿನ್ನನ್ನು ಮರಕ್ಕೆ ತೂಗು ಹಾಕಿಸುವನು, ಪಕ್ಷಿಗಳು ಬಂದು ನಿನ್ನ ಮಾಂಸವನ್ನು ತಿಂದುಬಿಡುವವು” ಎಂದನು. 20ಮೂರನೆಯ ದಿನದಲ್ಲಿ ಫರೋಹನ ಜನ್ಮ ದಿನವಾದುದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯಪಾನದಾಯಕನನ್ನೂ ಮತ್ತು ಮುಖ್ಯ ಅಡಿಗೆಭಟ್ಟನನ್ನು ಬಿಡಿಸಿ ಸೇವಕರ ಮಧ್ಯದಲ್ಲಿ ನಿಲ್ಲಿಸಿದನು. 21ಪಾನದಾಯಕರ ಮುಖ್ಯಸ್ಥನನ್ನು ಪುನಃ ಅವನ ಉದ್ಯೋಗಕ್ಕೆ ನೇಮಿಸಿದನು. ಅವನು ಪಾನ ಪಾತ್ರೆಯನ್ನು ಫರೋಹನ ಕೈಗೆ ಕೊಡುವವನಾದನು. 22ಆದರೆ ಮುಖ್ಯ ಅಡಿಗೆಭಟ್ಟನನ್ನು ಫರೋಹನು ಗಲ್ಲಿಗೆ ಹಾಕಿಸಿದನು. ಹೀಗೆ ಯೋಸೇಫನು ಹೇಳಿದಂತೆಯೇ ಆಯಿತು. 23ಆದಾಗ್ಯೂ ಮುಖ್ಯಪಾನದಾಯಕನು ಯೋಸೇಫನನ್ನು ನೆನಪುಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.

Keep going

Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..

Books

✦ Explain this verse with AI AI explanations, Bible Q&A, characters, maps and more — in the Truth of Bible app →

Reading settings

Theme
Text size
100%
Layout

Loading the Bibles…

Your choice is remembered on this device and used for reading, search and the verse screen.