Skip to content

Indian Revised Version — Kannada (2019)

ಯೆಹೆಜ್ಕೇಲನು 4

1“ನರಪುತ್ರನೇ, ನೀನು ಒಂದು ಇಟ್ಟಿಗೆಯನ್ನು ತೆಗೆದುಕೊಂಡು ನಿನ್ನ ಮುಂದಿಟ್ಟುಕೊಂಡು, ಅದರ ಮೇಲೆ ಯೆರೂಸಲೇಮ್ ಪಟ್ಟಣದ ನಕ್ಷೆಯನ್ನು ಬರೆ. 2ಆ ನಕ್ಷೆಯ ಸುತ್ತಲು ದಿಬ್ಬಹಾಕಿ, ಅಡ್ಡಕಟ್ಟಿ, ಪಾಳೆಯಗಳನ್ನು ಮಾಡಿ, ಕತ್ತರಿಸುವ ಯಂತ್ರಗಳನ್ನು ನಿಲ್ಲಿಸಿ, ಅದಕ್ಕೆ ಮುತ್ತಿಗೆ ಹಾಕು. 3ಆಮೇಲೆ ಕಬ್ಬಿಣದ ಹಂಚನ್ನು ತೆಗೆದುಕೊಂಡು ಅದನ್ನು ನಿನಗೂ ಮತ್ತು ಆ ಪಟ್ಟಣಕ್ಕೂ ಮಧ್ಯೆ ಕಬ್ಬಿಣದ ಗೋಡೆಯನ್ನಾಗಿ ನಿಲ್ಲಿಸಿ ಆ ಪಟ್ಟಣದ ಮೇಲೆ ದೃಷ್ಟಿಯಿಡು; ಅದು ಮುತ್ತಿಗೆ ಹಾಕಲ್ಪಡುವುದು, ನೀನು ಅದನ್ನು ಮುತ್ತಿಗೆ ಹಾಕಿದಂತಾಗುವುದು. ಇದು ಇಸ್ರಾಯೇಲ್ ವಂಶದವರಿಗೆ ಒಂದು ಗುರುತು. 4“ಇದಲ್ಲದೆ, ನೀನು ನಿನ್ನ ಎಡಮಗ್ಗುಲಲ್ಲಿ ಮಲಗಿಕೋ. ಇಸ್ರಾಯೇಲ್ ವಂಶದವರ ಪಾಪದ ಭಾರವನ್ನು ಅದರ ಮೇಲಿಡಬೇಕು. ನೀನು ಎಡಮಗ್ಗುಲಲ್ಲಿ ಮಲಗುವ ದಿನಗಳ ಪ್ರಕಾರ ಅವರ ಪಾಪದ ಭಾರವನ್ನು ಹೊತ್ತುಕೊಂಡಿರಬೇಕು. 5ನಾನು ದಿನಗಳ ಲೆಕ್ಕದ ಪ್ರಕಾರ ಅವರ ಪಾಪದ ವರ್ಷಗಳನ್ನು ನಿನಗೆ ನೇಮಿಸಿದ್ದೇನೆ. ಅವು ಮುನ್ನೂರತೊಂಬತ್ತು ದಿನಗಳಾಗಿವೆ. ಹೀಗೆ ನೀನು ಇಸ್ರಾಯೇಲ್ ವಂಶದವರ ಪಾಪವನ್ನು ನೀನು ಹೊರಬೇಕು. 6“ಅಷ್ಟು ದಿನಗಳು ತೀರಿದ ಮೇಲೆ ಬಲಮಗ್ಗುಲಲ್ಲಿ ಮಲಗಿಕೊಂಡು ಯೆಹೂದ ವಂಶದವರ ಪಾಪವನ್ನು ಅನುಭವಿಸಬೇಕು; ವರ್ಷ ಒಂದಕ್ಕೆ ಒಂದು ದಿನದ ಮೇರೆಗೆ ನಲ್ವತ್ತು ದಿನ ಅವರ ಪಾಪವನ್ನು ಹೊರಬೇಕೆಂದು ನಿನಗೆ ಗೊತ್ತುಮಾಡಿದ್ದೇನೆ. 7ನಿನ್ನ ತೋಳಿಗೆ ಹೊದಿಕೆಯಿಲ್ಲದೆ, ಮುತ್ತಿಗೆಯಾದ ಯೆರೂಸಲೇಮಿನ ಕಡೆಗೆ ಮುಖವನ್ನು ತಿರುಗಿಸಿ, ಅದರ ವಿಷಯವಾಗಿ ಅಶುಭವನ್ನು ಪ್ರವಾದಿಸು. 8ಇಗೋ, ನಿನ್ನ ಮುತ್ತಿಗೆಯ ದಿನಗಳು ತೀರುವ ತನಕ ನೀನು ಬಲಮಗ್ಗುಲಿಂದ ಎಡಮಗ್ಗುಲಿಗೆ ಹೊರಳದಂತೆ ನಿನ್ನನ್ನು ಬಂಧಿಸುವೆನು. 9“ಇದಲ್ಲದೆ ನೀನು ಗೋದಿ, ಜವೆಗೋದಿ, ಅವರೆ, ಅಲಸಂದಿ, ನವಣೆ, ಕಡಲೆ, ಇವುಗಳನ್ನು ತೆಗೆದುಕೊಂಡು ಒಂದೇ ಪಾತ್ರೆಯಲ್ಲಿ ಹಾಕಿ ಅವುಗಳಿಂದ ರೊಟ್ಟಿಯನ್ನು ಮಾಡಿಕೋ; ಮಗ್ಗುಲಲ್ಲಿ ಮಲಗಿಕೊಳ್ಳುವಷ್ಟು ದಿನ, ಅಂದರೆ ಮುನ್ನೂರತೊಂಬತ್ತು ದಿನ ಅದನ್ನು ತಿನ್ನು. 10ನಿನ್ನ ಆಹಾರವನ್ನು ತೂಕದ ಪ್ರಕಾರ ದಿನವೊಂದಕ್ಕೆ ಇಪ್ಪತ್ತು ತೊಲಾದಂತೆ (230 ಗ್ರಾಂ) ತಿನ್ನು; ಆಗಾಗ್ಗೆ ಸ್ವಲ್ಪ ಸ್ವಲ್ಪ ತಿನ್ನಬೇಕು. 11ನೀರನ್ನು ಅಳತೆಯ ಪ್ರಕಾರ ದಿನವೊಂದಕ್ಕೆ ಎರಡು ಬಟ್ಟಲಂತೆ ಕುಡಿ; ಆಗಾಗ್ಗೆ ಸ್ವಲ್ಪ ಸ್ವಲ್ಪ ಕುಡಿಯಬೇಕು. 12ನೀನು ಸೌದೆಗೆ ಬದಲಾಗಿ ಮನುಷ್ಯರ ಮಲವನ್ನು ಉರಿಸಿ, ನಿನ್ನ ಜನರ ಕಣ್ಣೆದುರಿಗೆ ಆ ಹಿಟ್ಟನ್ನು ರೊಟ್ಟಿಮಾಡಿ ಜವೆಗೋದಿಯ ರೊಟ್ಟಿಗಳಂತೆ ತಿನ್ನು. 13ಹಾಗೆಯೇ ಇಸ್ರಾಯೇಲ್ ವಂಶದವರು ನನ್ನಿಂದ ಅನ್ಯದೇಶಗಳಿಗೆ ಅಟ್ಟಲ್ಪಟ್ಟು ಆ ದೇಶೀಯರ ನಡುವೆ ವಾಸಿಸುತ್ತಾ ತಮ್ಮ ಆಹಾರವನ್ನು ಹೊಲಸಾಗಿ ತಿನ್ನುವರು” ಇದು ಯೆಹೋವನ ನುಡಿ. 14ಅದಕ್ಕೆ ನಾನು, “ಅಯ್ಯೋ, ಕರ್ತನಾದ ಯೆಹೋವನೇ, ನಾನು ಹೊಲಸನ್ನು ಮುಟ್ಟಿದವನಲ್ಲ, ನಾನು ಹುಟ್ಟಿದಂದಿನಿಂದ ಇಂದಿನವರೆಗೂ ಸತ್ತ ಪಶುವಿನ ಮಾಂಸವನ್ನಾಗಲಿ, ಕಾಡುಮೃಗವು ಕೊಂದ ಪಶುವಿನ ಮಾಂಸವನ್ನಾಗಲಿ ತಿಂದವನೇ ಅಲ್ಲ; ಯಾವ ಅಸಹ್ಯಪದಾರ್ಥವೂ ನನ್ನ ಬಾಯೊಳಗೆ ಸೇರಲಿಲ್ಲ” ಎಂದು ಅರಿಕೆಮಾಡಲು, 15ಆತನು ನನಗೆ, “ನೋಡು, ಮನುಷ್ಯರ ಮಲಕ್ಕೆ ಬದಲಾಗಿ ದನಗಳ ಸಗಣಿಯನ್ನು ನಿನಗೆ ಗೊತ್ತುಮಾಡಿದ್ದೇನೆ, ಇದನ್ನು ಉರಿಸಿ ನಿನ್ನ ರೊಟ್ಟಿಯನ್ನು ಸುಟ್ಟುಕೋ” ಎಂದು ಉತ್ತರಕೊಟ್ಟನು. 16ಇದಲ್ಲದೆ ಆತನು ನನಗೆ ಹೀಗೆ ಹೇಳಿದನು, “ನರಪುತ್ರನೇ, ನಾನು ಯೆರೂಸಲೇಮಿನಲ್ಲಿ ಆಹಾರ ಸರಬರಾಜನ್ನು ನಿಲ್ಲಿಸಿಬಿಡುವೆನು. ನಿವಾಸಿಗಳು ಅನ್ನವನ್ನು ತೂಕದ ಪ್ರಕಾರ ಕಳವಳದಿಂದ ತಿನ್ನುವರು, ನೀರನ್ನು ಅಳತೆಯ ಪ್ರಕಾರ ನಡುಗುತ್ತಾ ಕುಡಿಯುವರು. 17ಅವರಲ್ಲಿ ಪ್ರತಿಯೊಬ್ಬರೂ ಅನ್ನ ಮತ್ತು ನೀರಿನ ಕೊರತೆಯಿಂದ ಕುಗ್ಗಿ ತಮ್ಮ ಅಧರ್ಮದಿಂದ ನಾಶವಾಗಿ ಹೋಗುವರು.”

Keep going

Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..

Books

✦ Explain this verse with AI AI explanations, Bible Q&A, characters, maps and more — in the Truth of Bible app →

Reading settings

Theme
Text size
100%
Layout

Loading the Bibles…

Your choice is remembered on this device and used for reading, search and the verse screen.