Skip to content

Indian Revised Version — Kannada (2019)

ವಿಮೋಚನಕಾಂಡ 30

1“ಸುಗಂಧದ್ರವ್ಯಗಳಿಂದ ಧೂಪಹಾಕುವುದಕ್ಕೆ ನೀವು ಜಾಲೀಮರದಿಂದ ಒಂದು ಧೂಪವೇದಿಯನ್ನು ಮಾಡಿಸಬೇಕು. 2ಅದು ಒಂದು ಮೊಳ ಉದ್ದವಾಗಿಯು, ಒಂದು ಮೊಳ ಅಗಲವಾಗಿಯೂ ಇದ್ದು ಚಚ್ಚೌಕವಾಗಿರಬೇಕು. ಅದರ ಎತ್ತರವು ಎರಡು ಮೊಳವಾಗಿರಬೇಕು. ಅದರ ಕೊಂಬುಗಳು ಅದರಿಂದಲೇ ಆಗಿರಬೇಕು. 3ಅದರ ಮೇಲ್ಭಾಗಕ್ಕೆ, ನಾಲ್ಕು ಬದಿಗಳಿಗೆ ಹಾಗೂ ಕೊಂಬುಗಳಿಗೆ, ಚೊಕ್ಕ ಬಂಗಾರದ ತಗಡುಗಳನ್ನು ಹೊದಿಸಬೇಕು. ಸುತ್ತಲೂ ಚಿನ್ನದ ಅರುಗನ್ನು (ಅಂಚು) ಕಟ್ಟಿಸಬೇಕು. 4ಅದರ ತೋರಣದ ಕೆಳಗೆ ಯಜ್ಞವೇದಿಯ ಎರಡು ಪಾರ್ಶ್ವಗಳಲ್ಲಿ ಎರಡೆರಡು ಚಿನ್ನದ ಬಳೆಗಳನ್ನು ಮೂಲೆಗಳಲ್ಲಿಯೇ ಹಾಕಿಸಬೇಕು. ಯಜ್ಞವೇದಿಯನ್ನು ಹೊರುವುದಕ್ಕೆ ಕಂಬಗಳನ್ನು ಅವುಗಳಲ್ಲಿ ಸೇರಿಸಬೇಕು. 5ಆ ಕಂಬಗಳನ್ನು ಜಾಲೀಮರದಿಂದ ಮಾಡಿಸಿ ಅವುಗಳಿಗೆ ಚಿನ್ನದ ತಗಡುಗಳನ್ನು ಹೊದಿಸಬೇಕು. 6ಆಜ್ಞಾಶಾಸನವಿರುವ ಮಂಜೂಷದ ಮುಂದಣ ಪರದೆಗೆ ಎದುರಾಗಿ, ಅಂದರೆ ಆಜ್ಞಾಶಾಸನವಿರುವ ಮಂಜೂಷದ ಮೇಲಿರುವಂಥ ಮತ್ತು ನಾನು ನಿನಗೆ ದರ್ಶನ ಕೊಡುವಂಥ ಕೃಪಾಸನದ ಮುಂದೆ ಅದನ್ನು ಇಡಬೇಕು. 7“ಆರೋನನು ಪ್ರತಿನಿತ್ಯ ಹೊತ್ತಾರೆಯಲ್ಲಿ ದೀಪಗಳನ್ನು ಸರಿಪಡಿಸುವಾಗಲೂ 8ಸಾಯಂಕಾಲದಲ್ಲಿ ದೀಪಗಳನ್ನು ಹೊತ್ತಿಸುವಾಗಲೂ ಅದರ ಮೇಲೆ ಸುಗಂಧದ್ರವ್ಯಗಳಿಂದ ಧೂಪವನ್ನು ಹಾಕಬೇಕು. ಹೀಗೆ ನಿಮ್ಮಿಂದಲೂ ನಿಮ್ಮ ಸಂತತಿಯವರಿಂದಲೂ ಯೆಹೋವನ ಸನ್ನಿಧಿಯಲ್ಲಿ ನಿರಂತರವಾದ ಧೂಪ ಸಮರ್ಪಣೆಯು ನಡೆಯುತ್ತಿರಬೇಕು. 9ಆ ಯಜ್ಞವೇದಿಯ ಮೇಲೆ ಬೇರೆ ಯಾವ ಧೂಪವನ್ನೂ ಹಾಕಬಾರದು. ಅದರ ಮೇಲೆ ಇತರೆ ಹೋಮವನ್ನಾಗಲಿ, ಭೋಜನದ್ರವ್ಯವನ್ನಾಗಲಿ ಹಾಗೂ ಪಾನದ್ರವ್ಯವನ್ನಾಗಲಿ ಸಮರ್ಪಿಸಕೂಡದು. 10ಆರೋನನು ಅವನ ಸಂತತಿಯವರೂ ವರ್ಷಕ್ಕೆ ಒಂದು ಸಾರಿ ದೋಷಪರಿಹಾರಕ ಯಜ್ಞದ ಪಶುವಿನ ರಕ್ತವನ್ನು ಆ ಯಜ್ಞವೇದಿಯ ಕೊಂಬುಗಳಿಗೆ ಹಚ್ಚಿ ಅದರ ಕುರಿತಾಗಿ ದೋಷಪರಿಹಾರವನ್ನು ಮಾಡಬೇಕು. ಅದು ಯೆಹೋವನಿಗೆ ಅತಿ ಪರಿಶುದ್ಧವಾಗಿದೆ.” 11ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, 12“ನೀನು ಇಸ್ರಾಯೇಲ್ಯರ ಜನಗಣತಿ ಮಾಡಿಸಿ ಅವರನ್ನು ಲೆಕ್ಕಿಸುವಾಗ ಅವರಿಗೆ ಬಾಧೆಯುಂಟಾಗಿ ವ್ಯಾಧಿ ಸಂಭವಿಸದಂತೆ ಪ್ರತಿಯೊಬ್ಬನೂ ತನ್ನ ತನ್ನ ಪ್ರಾಣಕ್ಕಾಗಿ ವಿಮೋಚನ ಕ್ರಯವನ್ನು ಯೆಹೋವನಿಗೆ ಕೊಡಬೇಕು. 13ಲೆಕ್ಕಿತರಾದವರಲ್ಲಿ ಪ್ರತಿಯೊಬ್ಬನೂ ದೇವರ ಸೇವೆಗೆ ನೇಮಕವಾದ ಇಪ್ಪತ್ತು ಗೇರಾ ತೂಕದ ರೂಪಾಯಿಯ ಮೇರೆಗೆ ಅರ್ಧ ಶೆಕೆಲ್ ಕಾಣಿಕೆಯನ್ನು ಕೊಡಬೇಕು. ಈ ಅರ್ಧ ಶೆಕೆಲ್ ಯೆಹೋವನಿಗೆ ಪವಿತ್ರವಾದ ಕಾಣಿಕೆಯಾಗಿರುತ್ತದೆ. 14ಲೆಕ್ಕ ಮಾಡಿದವರಲ್ಲಿ ಇಪ್ಪತ್ತು ವರ್ಷದವರೂ ಹಾಗೂ ಅದಕ್ಕೆ ಮೇಲ್ಪಟ್ಟ ವಯಸ್ಸುಳ್ಳವರೂ ಆ ಕಾಣಿಕೆಯನ್ನು ಯೆಹೋವನಿಗೆ ಕೊಡಬೇಕು. 15ಪ್ರಾಣಗಳ ಪ್ರಾಯಶ್ಚಿತ್ತಕ್ಕಾಗಿ ಕಾಣಿಕೆಯನ್ನು ಯೆಹೋವನಿಗೆ ಕೊಡುವುದರಲ್ಲಿ ಐಶ್ವರ್ಯವಂತರಾದರೂ ಅರ್ಧಶೆಕೆಲಿಗಿಂತ ಹೆಚ್ಚು ಕೊಡಬಾರದು. ಬಡವರು ಕಡಿಮೆ ಕೊಡಬಾರದು. 16ನೀನು ಪ್ರಾಣಗಳ ಪ್ರಾಯಶ್ಚಿತ್ತಕ್ಕಾಗಿ ಹಣವನ್ನು ಇಸ್ರಾಯೇಲರಿಂದ ತೆಗೆದುಕೊಂಡು ಅದನ್ನು ದೇವದರ್ಶನದ ಗುಡಾರದ ಸೇವೆಗೆ ಉಪಯೋಗಿಸಬೇಕು. ಇಸ್ರಾಯೇಲರ ಪ್ರಾಣಗಳನ್ನು ಉಳಿಸಬೇಕೆಂಬುದಾಗಿ ಆ ಕಾಣಿಕೆಯು ಯೆಹೋವನಾದ ನನ್ನ ಸನ್ನಿಧಿಯಲ್ಲಿ ಜ್ಞಾಪಕವಾಗಿರುವುದು.” 17ಯೆಹೋವನು ಮೋಶೆಗೆ ಹೇಳಿದ್ದೇನೆಂದರೆ, 18“ಸ್ನಾನಕ್ಕಾಗಿ ಒಂದು ತಾಮ್ರದ ತೊಟ್ಟಿಯನ್ನೂ ಅದಕ್ಕೆ ತಾಮ್ರದ ಪೀಠವನ್ನೂ ಮಾಡಿಸಿ ದೇವದರ್ಶನದ ಗುಡಾರಕ್ಕೂ, ಯಜ್ಞವೇದಿಗೂ ನಡುವೆ ಇಟ್ಟು ಅದರಲ್ಲಿ ನೀರು ತುಂಬಿಸಬೇಕು. 19ಆರೋನನೂ ಅವನ ಮಕ್ಕಳೂ ಅದರಿಂದ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. 20ಅವರು ದೇವದರ್ಶನದ ಗುಡಾರದೊಳಗೆ ಹೋಗುವಾಗ ಹಾಗೂ ದೇವರ ಸೇವೆಯನ್ನು ಮಾಡುವವರಾಗಿ ಯೆಹೋವನಿಗೆ ಹೋಮವನ್ನು ಸಮರ್ಪಿಸುವುದಕ್ಕಾಗಿ ಯಜ್ಞವೇದಿಯ ಬಳಿಗೆ ಬರುವಾಗ ಜೀವದಿಂದಿರಲು ಕೈಕಾಲುಗಳನ್ನು ತೊಳೆದುಕೊಂಡು ಬರಬೇಕು. 21ತೊಳೆದುಕೊಳ್ಳದೆ ಬಂದರೆ ಮರಣ ಶಿಕ್ಷೆಯಾಗುವುದು. ಇದು ಅವನಿಗೂ ಮತ್ತು ಅವನ ಸಂತತಿಯವರಿಗೂ ಶಾಶ್ವತ ನಿಯಮವಾಗಿರಬೇಕು.” 22ಇದಲ್ಲದೆ ಯೆಹೋವನು ಮೋಶೆಗೆ ಪುನಃ ಹೇಳಿದ್ದೇನೆಂದರೆ, 23“ನೀನು ಸುಗಂಧದ್ರವ್ಯಗಳಲ್ಲಿ ದೇವರ ಸೇವೆಗೆ ನೇಮಕವಾದ ತೂಕದ ಮೇರೆಗೆ ಐನೂರು ಶೆಕೆಲ್ ಅಚ್ಚರಕ್ತಬೋಳ, ಅದರರ್ಧ ಅಂದರೆ ಇನ್ನೂರೈವತ್ತು ಶೆಕೆಲ್ ಶ್ರೇಷ್ಠವಾದ ಲವಂಗ, 24ಐನೂರು ಸುಗಂಧವಾದ ಚೆಕ್ಕೆ, ಮತ್ತು ಒಂದು ಹೀನ್ ಒಲೀವ್ ಎಣ್ಣೆ ಇವುಗಳನ್ನೆಲ್ಲಾ ತೆಗೆದುಕೊಂಡು, 25ಸುಗಂಧ ದ್ರವ್ಯಕಾರರ ಪದ್ದತಿಯ ಮೇರೆಗೆ ಮಿಶ್ರಮಾಡಿ ಪರಿಶುದ್ಧವಾದ ಅಭಿಷೇಕ ತೈಲವನ್ನು ಮಾಡಿಸಬೇಕು. ಇದು ಪರಿಶುದ್ಧವಾದ ಅಭಿಷೇಕ ತೈಲವಾಗಿರುವುದು. 26ಆದುದರಿಂದ ದೇವದರ್ಶನದ ಗುಡಾರ, ಆಜ್ಞಾಶಾಸನಗಳ ಮಂಜೂಷ, ಮೇಜು, ಮೇಜಿನ ಉಪಕರಣಗಳು, 27ದೀಪಸ್ತಂಭ, ದೀಪಸ್ತಂಭದ ಉಪಕರಣಗಳು, 28ಧೂಪವೇದಿ, ಯಜ್ಞವೇದಿ, ಯಜ್ಞವೇದಿಯ ಉಪಕರಣಗಳು ಹಾಗು ನೀರಿನ ತೊಟ್ಟಿ ಅದರ ಪೀಠ ಇವುಗಳನ್ನೆಲ್ಲಾ ಅಭಿಷೇಕಿಸಬೇಕು. 29ಅವು ಅತಿ ಪರಿಶುದ್ಧವಾಗುವಂತೆ ಅವುಗಳನ್ನು ಶುದ್ಧೀಕರಿಸಬೇಕು. ಅವುಗಳನ್ನು ಮುಟ್ಟುವವರೆಲ್ಲರೂ ಪರಿಶುದ್ಧರಾಗಿರಬೇಕು. 30ಅದಲ್ಲದೆ ಆರೋನನೂ ಅವನ ಮಕ್ಕಳೂ ನನಗೆ ಯಾಜಕರಾಗುವಂತೆ ಅವರನ್ನು ಅಭಿಷೇಕಿಸಿ ಶುದ್ಧೀಕರಿಸಬೇಕು.” 31ನೀನು ಇಸ್ರಾಯೇಲರಿಗೆ ಆಜ್ಞಾಪಿಸತಕ್ಕದ್ದೇನೆಂದರೆ, “ನೀವೂ ನಿಮ್ಮ ಸಂತತಿಯವರೂ ಈ ತೈಲವನ್ನು ನನ್ನ ಸೇವೆಗೆ ನೇಮಕವಾದ ಪರಿಶುದ್ಧ ಅಭಿಷೇಕ ತೈಲವೆಂದು ತಿಳಿದುಕೊಳ್ಳಬೇಕು. 32ಜನರು ಮೈಗೆ ಹಚ್ಚಿಕೊಳ್ಳುವುದಕ್ಕೆ ಇದನ್ನು ಉಪಯೋಗಿಸಬಾರದು. ಈ ವಿಧಾನದ ಮೇರೆಗೆ ಬೇರೆ ಕೆಲಸಕ್ಕಾಗಿ ತೈಲವನ್ನು ಮಾಡಲೇಬಾರದು. ಇದು ದೇವರ ವಸ್ತು. ಇದು ಪರಿಶುದ್ಧವಾದದ್ದು ಎಂದು ನೀವು ತಿಳಿದುಕೊಳ್ಳಬೇಕು. 33ಇದರಂತೆ ತೈಲವನ್ನು ಮಾಡುವವನಾಗಲಿ ಇದನ್ನು ಯಾಜಕನಲ್ಲದವನ ಮೇಲೆ ಹಚ್ಚುವವನಾಗಲಿ ತನ್ನ ಕುಲದಿಂದ ಬಹಿಷ್ಕೃತನಾಗುವನು.” 34ಅದಲ್ಲದೆ ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ, “ನೀನು ಹಾಲುಮಡ್ಡಿ, ಗುಗ್ಗುಲ ಹಾಗೂ ಗಂಧದ ಚೆಕ್ಕೆ ಎಂಬ ಪರಿಮಳ ದ್ರವ್ಯಗಳನ್ನು ಸ್ವಚ್ಛವಾದ ಧೂಪವನ್ನೂ ಸಮಭಾಗವಾಗಿ ತೆಗೆದುಕೊಂಡು, 35ಸುಗಂಧ ದ್ರವ್ಯ ತಯಾರಿಸುವವರ ಕೌಶಲ್ಯಕ್ಕೆ ತಕ್ಕಂತೆ ಕಲಿಸಿ ಉಪ್ಪು ಹಾಕಿ ದೇವರ ಸೇವೆಗೆ ಪವಿತ್ರವಾದ ಧೂಪದ್ರವ್ಯವನ್ನು ಮಾಡಿಸಬೇಕು. 36ಅದರಲ್ಲಿ ಸ್ವಲ್ಪವನ್ನು ಪುಡಿಮಾಡಿಸಿ ದೇವದರ್ಶನದ ಗುಡಾರದೊಳಗೆ ಆಜ್ಞಾಶಾಸನಗಳ ಮಂಜೂಷದ ಎದುರಾಗಿ ನಾನು ನಿನಗೆ ದರ್ಶನ ಕೊಡುವ ಸ್ಥಳದಲ್ಲಿ ಇರಿಸಬೇಕು. ಅದು ಅತಿ ಪರಿಶುದ್ಧವಾದದ್ದೆಂದು ನೀವು ಭಾವಿಸಬೇಕು. 37ನೀವು ಆ ಧೂಪದ್ರವ್ಯದ ವಿಧಾನದ ಮೇರೆಗೆ ನಿಮ್ಮ ಸ್ವಂತಕ್ಕೋಸ್ಕರ ಧೂಪದ್ರವ್ಯವನ್ನು ಮಾಡಿಸಿಕೊಳ್ಳಬಾರದು. ಅದು ಯೆಹೋವನ ಸೇವೆಗೆ ಮಾತ್ರ ಉಪಯೋಗಿಸಬೇಕಾದ ಮೀಸಲಾದ ಪವಿತ್ರ ಪದಾರ್ಥವೆಂದು ಭಾವಿಸಬೇಕು. 38ಸುವಾಸನೆಗೋಸ್ಕರ ಅಂಥದನ್ನು ಮಾಡಿಕೊಳ್ಳುವವನು ತನ್ನ ಕುಲದಿಂದ ಬಹಿಷ್ಕಾರಕ್ಕೆ ಗುರಿಯಾಗುವನು.”

Keep going

Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..

Books

✦ Explain this verse with AI AI explanations, Bible Q&A, characters, maps and more — in the Truth of Bible app →

Reading settings

Theme
Text size
100%
Layout

Loading the Bibles…

Your choice is remembered on this device and used for reading, search and the verse screen.