Skip to content

Indian Revised Version — Kannada (2019)

ಧರ್ಮೋಪದೇಶಕಾಂಡ 14

1ನೀವು ನಿಮ್ಮ ದೇವರಾಗಿರುವ ಯೆಹೋವನ ಮಕ್ಕಳಾಗಿರುವುದರಿಂದ ಸತ್ತವರಿಗೋಸ್ಕರ ದೇಹವನ್ನು ಗಾಯಮಾಡಿಕೊಳ್ಳಬಾರದು ಮತ್ತು ತಲೆಯ ಮುಂದಿನಭಾಗವನ್ನು ಬೋಳಿಸಿಕೊಳ್ಳಲೂ ಬಾರದು. 2ಯಾಕೆಂದರೆ ನೀವು ಕೇವಲ ನಿಮ್ಮ ದೇವರಾದ ಯೆಹೋವನ ಪರಿಶುದ್ಧ ಜನರೇ. ಆತನು ಭೂಲೋಕದಲ್ಲಿರುವ ಸಮಸ್ತ ಜನಾಂಗಗಳಲ್ಲಿ ನಿಮ್ಮನ್ನೇ ಸ್ವಕೀಯ ಜನರಾಗುವುದಕ್ಕೆ ಆರಿಸಿಕೊಂಡಿದ್ದಾನೆ ಎಂಬುದು ನಿಮಗೆ ತಿಳಿದಿರಬೇಕು. 3ನಿಷಿದ್ಧವಾಗಿರುವ ಯಾವುದನ್ನೂ ನೀವು ತಿನ್ನಬಾರದು. 4ನೀವು ತಿನ್ನಬಹುದಾದ ಪಶುಜಾತಿಗಳು ಯಾವುವೆಂದರೆ ದನ, ಕುರಿ, ಆಡು, 5ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ, ಕೊಂಡಗುರಿ (ಕಾಡುಟಗರು) ಎಂಬಿವುಗಳೇ. 6ಯಾವ ಪ್ರಾಣಿಯ ಕಾಲ್ಗೊರಸು ಸೀಳಿದೆಯೋ ಅದು ಮೆಲಕುಹಾಕುವಂಥದಾದರೆ ಅದರ ಮಾಂಸವನ್ನು ತಿನ್ನಬಹುದು. 7ಆದರೆ ಯಾವ ಪ್ರಾಣಿಯು ಮೆಲಕುಹಾಕಿದರೂ ಗೊರಸು ಸೀಳಿರುವುದಿಲ್ಲವೋ ಮತ್ತು ಯಾವ ಪ್ರಾಣಿಯ ಗೊರಸು ಸೀಳಿದ್ದರೂ ಮೆಲಕು ಹಾಕುವುದಿಲ್ಲವೋ, ಅವುಗಳ ಮಾಂಸವನ್ನು ನೀವು ತಿನ್ನಬಾರದು. ಉದಾಹರಣೆ: ಒಂಟೆ, ಮೊಲ, ಬೆಟ್ಟದಮೊಲ ಇವುಗಳು ಮೆಲಕುಹಾಕುವಂಥವುಗಳಾದರೂ ಸೀಳುಗೊರಸು ಇಲ್ಲವಾದ ಕಾರಣ ಅವು ನಿಮಗೆ ಅಶುದ್ಧ. 8ಹಂದಿಯ ಗೊರಸು ಸೀಳಿದ್ದರೂ ಅದು ಮೆಲಕುಹಾಕುವುದಿಲ್ಲವಾದುದರಿಂದ ಅದು ನಿಮಗೆ ಅಶುದ್ಧ. ಇವುಗಳ ಮಾಂಸವನ್ನು ನೀವು ತಿನ್ನಬಾರದು; ಇವುಗಳ ಹೆಣವನ್ನು ಮುಟ್ಟಬಾರದು. 9ಜಲಜಂತುಗಳಲ್ಲಿ ನೀವು ತಿನ್ನಬಹುದಾದವುಗಳು ಯಾವುವೆಂದರೆ: ಯಾವ ಜಾತಿಯ ಜಲಜಂತುಗಳಿಗೆ ರೆಕ್ಕೆ ಇದ್ದು ದೇಹವೆಲ್ಲಾ ಪರೆಪರೆಯಾಗಿರುವುದೋ ಅದರ ಮಾಂಸವನ್ನು ತಿನ್ನಬಹುದು. 10ಯಾವ ಜಾತಿಯ ಜಲಜಂತುಗಳಿಗೆ ರೆಕ್ಕೆಯೂ ಮತ್ತು ಪರೆಪರೆಯಾದ ದೇಹವು ಇರುವುದಿಲ್ಲವೋ ಅವುಗಳ ಮಾಂಸವನ್ನು ನೀವು ತಿನ್ನಬಾರದು; ಅದು ನಿಮಗೆ ಅಶುದ್ಧ. 11ಎಲ್ಲಾ ಶುದ್ಧ ಪಕ್ಷಿಗಳ ಮಾಂಸವನ್ನು ನೀವು ತಿನ್ನಬಹುದು. 12ನೀವು ತಿನ್ನಬಾರದವುಗಳು ಯಾವುವೆಂದರೆ ಗರುಡ, ಬೆಟ್ಟದ ಹದ್ದು, ಕ್ರೌಂಚ, 13ಗಿಡಗ, ಹಕ್ಕಿಸಾಲೆ, ಸಕಲವಿಧವಾದ ಹದ್ದು, 14ಸಕಲವಿಧವಾದ ಕಾಗೆ, 15ಉಷ್ಟ್ರಪಕ್ಷಿ, ಉಲೂಕ, ಕಡಲಹಕ್ಕಿ, ಸಕಲವಿಧವಾದ ಡೇಗೆ, 16ಗೂಬೆ, ಹೆಗ್ಗೂಬೆ, ಕರೇಟು, 17ಚೀಲಮೂಗಿ, ರಣಹದ್ದು, ನೀರುಕಾಗೆ, 18ಕೊಕ್ಕರೆ, ಸಕಲವಿಧವಾದ ಬಕ, ಹೆಡೆಹಕ್ಕಿ ಮತ್ತು ಕಣ್ಣಕಪಡಿ. 19ರೆಕ್ಕೆಯುಳ್ಳ ಕ್ರಿಮಿಕೀಟಗಳೆಲ್ಲವೂ ನಿಮಗೆ ಅಶುದ್ಧ. ಅವುಗಳನ್ನು ನೀವು ತಿನ್ನಬಾರದು. 20ರೆಕ್ಕೆಯುಳ್ಳವುಗಳಲ್ಲಿ ಶುದ್ಧ ಜಾತಿಯವುಗಳನ್ನು ಮಾತ್ರ ನೀವು ತಿನ್ನಬಹುದು. 21ಸತ್ತುಬಿದ್ದದ್ದನ್ನು ನೀವು ತಿನ್ನಬಾರದು; ನಿಮ್ಮ ಊರಲ್ಲಿರುವ ಪರದೇಶೀಯರಿಗೆ ಅದನ್ನು ತಿನ್ನುವುದಕ್ಕೆ ಕೊಡಬಹುದು, ಅನ್ಯರಿಗೆ ಮಾರಬಹುದು. ನೀವಾದರೋ ನಿಮ್ಮ ದೇವರಾದ ಯೆಹೋವನಿಗೆ ಪ್ರತಿಷ್ಠಿತರಾದವರು. ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು. 22ಪ್ರತಿವರ್ಷದ ನಿಮ್ಮ ಹೊಲದ ಬೆಳೆಯಲ್ಲಿ ದಶಮ ಭಾಗವನ್ನು ಪ್ರತ್ಯೇಕಿಸಬೇಕು. 23ಧಾನ್ಯ, ದ್ರಾಕ್ಷಿ, ಎಣ್ಣೆ ಇವುಗಳಲ್ಲಿ ದಶಮಭಾಗವನ್ನೂ ದನಕುರಿಗಳ ಚೊಚ್ಚಲು ಮರಿಗಳನ್ನೂ ಮತ್ತು ನಿಮ್ಮ ಹಿಂಡುಗಳನ್ನು ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಆತನು ತನ್ನ ಹೆಸರನ್ನು ಸ್ಥಾಪಿಸಿಕೊಳ್ಳುವುದಕ್ಕೆ ಆರಿಸಿಕೊಳ್ಳುವ ಸ್ಥಳದಲ್ಲೇ ನೀವು ತಿನ್ನಬೇಕು. ಹೀಗೆ ನಿಮ್ಮ ದೇವರಾದ ಯೆಹೋವನಲ್ಲೇ ಯಾವಾಗಲೂ ಭಯಭಕ್ತಿಯುಳ್ಳವರಾಗಿ ಇರುವುದನ್ನು ಅಭ್ಯಾಸ ಮಾಡಿಕೊಳ್ಳುವವರಾಗಿರಬೇಕು. 24ನಿಮ್ಮ ದೇವರಾದ ಯೆಹೋವನು ಆರಿಸಿಕೊಳ್ಳುವ ಸ್ಥಳವು ನಿಮಗೆ ದೂರವಾಗಿದ್ದು, ಆ ಕಾಣಿಕೆಗಳನ್ನು ಅಷ್ಟು ದೂರ ಹೊತ್ತುಕೊಂಡು ಹೋಗುವುದು ಅಸಾಧ್ಯವಾದರೆ, ನಿಮ್ಮ ದೇವರಾದ ಯೆಹೋವನು ನಿಮಗೆ ಅಭಿವೃದ್ಧಿಯನ್ನು ಉಂಟುಮಾಡಿದ ಕಾಲದಲ್ಲಿ, 25ಅವುಗಳನ್ನು ಮಾರಿಬಿಟ್ಟು, ಆ ಹಣದ ಗಂಟನ್ನು ಆತನು ಆರಿಸಿಕೊಂಡ ಸ್ಥಳಕ್ಕೆ ತೆಗೆದುಕೊಂಡು ಹೋಗಿರಿ. 26ಅಲ್ಲಿ ನಿಮ್ಮ ಇಷ್ಟಾನುಸಾರ ದನ, ಕುರಿ, ದ್ರಾಕ್ಷಾರಸ, ಮದ್ಯ ಮೊದಲಾದವುಗಳನ್ನು ಆ ಹಣದಿಂದ ಕೊಂಡುಕೊಂಡು, ನೀವೂ ಮತ್ತು ನಿಮ್ಮ ಮನೆಯವರೂ ನಿಮ್ಮ ದೇವರಾದ ಯೆಹೋವನ ಸನ್ನಿಧಿಯಲ್ಲಿ ಊಟಮಾಡಿ ಸಂತೋಷವಾಗಿರಬೇಕು. 27ಲೇವಿಯರಿಗೆ ನಿಮ್ಮೊಡನೆ ಯಾವ ಸ್ವಾಸ್ತ್ಯವೂ ಇಲ್ಲವಾದ್ದರಿಂದ ನೀವು ಅವರನ್ನು ಕೈಬಿಡಬಾರದು. 28ಪ್ರತಿ ಮೂರನೆಯ ವರ್ಷದ ಬೆಳೆಯ ದಶಮಭಾಗವನ್ನು ತಂದು ನೀವು ಇರುವ ಊರಿನಲ್ಲಿಯೇ ಕೂಡಿಸಬೇಕು. 29ಆಗ ಊರಿನಲ್ಲಿರುವ ಅನ್ಯದೇಶದವರೂ, ಅನಾಥರು, ವಿಧವೆಯರೂ ಮತ್ತು ನಿಮ್ಮೊಡನೆ ಸ್ವತ್ತನ್ನು ಹೊಂದದೆಹೋದ ಲೇವಿಯರೂ ಊಟಮಾಡಿ ಸಂತೋಷವಾಗಿರಲಿ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಮಾಡುವನು.

Keep going

Indian Revised Version — Kannada (2019). Indian Revised Version (Kannada), Bridge Connectivity Solutions, CC BY-SA 4.0, via eBible.org. Inline cross-reference notes removed..

Books

✦ Explain this verse with AI AI explanations, Bible Q&A, characters, maps and more — in the Truth of Bible app →

Reading settings

Theme
Text size
100%
Layout

Loading the Bibles…

Your choice is remembered on this device and used for reading, search and the verse screen.